May 1, 2026
Friday, May 1, 2026
spot_img

ವಿಷ್ಣುವರ್ಧನ್‌ ಸ್ಮಾರಕಕ್ಕಾಗಿ ಅಭಿಮಾನ್ ಸ್ಟುಡಿಯೋ ಜಾಗವನ್ನು ಸ್ವಾಧೀನ ಮಾಡಿ: ರಾಜ್ಯ ಸರ್ಕಾರಕ್ಕೆ ಶೋಭಾ ಕರಂದ್ಲಾಜೆ ಪತ್ರ 

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಭಿಮಾನ್‌ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್‌ ಅವರ ಸಮಾಧಿ ತೆರವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ವಿಷ್ಣುವರ್ಧನ್‌ ಅವರ ಸ್ಮಾರಕಕ್ಕಾಗಿ ಅಭಿಮಾನ್ ಸ್ಟುಡಿಯೊದ ಜಾಗವನ್ನು ಸ್ವಾಧೀನ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕದ ಚಲನಚಿತ್ರ ಲೋಕದಲ್ಲಿ ʼಸಾಹಸಸಿಂಹ’ ಎಂದು ಹೆಸರಾದ, ಜನಮನಗಳನ್ನು ಗೆದ್ದ, ಶ್ರೇಷ್ಠ ನಟ ಸಂಸ್ಕೃತಿ ಪ್ರೇಮಿ ಡಾ. ವಿಷ್ಣುವರ್ಧನ್ ಅವರ ಸೇವೆ ಮತ್ತು ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಮತ್ತು ಕರ್ನಾಟಕದ ಹೆಸರನ್ನು ದೇಶದಾದ್ಯಂತ ಪರಿಚಯಿಸಿದ ಮಹಾನ್ ವ್ಯಕ್ತಿಯಾಗಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ, ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಧ್ವಂಸ ಮಾಡಿರುವುದು ನಮ್ಮೆಲ್ಲರಿಗೂ ಭಾರೀ ನೋವು ತಂದಿದೆ.

ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಶಾಶ್ವತವಾಗಿ ಕಾಪಾಡಿ, ಅದನ್ನು ರಾಷ್ಟ್ರೀಯ ಮಟ್ಟದ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ, ಕಲೆಯ ಪ್ರದರ್ಶನ ಮತ್ತು ತರಬೇತಿಯ ಕಲಾ ಗ್ರಾಮವಾಗಿ ಹಾಗೂ ಕನ್ನಡ ಸಂಸ್ಕೃತಿಯ ಪ್ರತೀಕವಾಗಿ ಅಭಿವೃದ್ಧಿಪಡಿಸುವಂತೆ ಕೋರುತ್ತೇನೆ. ಈ ಹಿನ್ನೆಲೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಆ ಭೂಮಿಯನ್ನು ತಕ್ಷಣವೇ ಭೂಸ್ವಾಧೀನಪಡಿಸಿಕೊಳ್ಳಬೇಕು ಹಾಗೂ ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !