ಹೊಸದಿಗಂತ ವರದಿ, ಕಾರವಾರ:
ದೇಶಾದ್ಯಂತ ಸೈಬರ್ ವಂಚನೆ, ಡಿಜಿಟಲ್ ಅರೆಸ್ಟ್ ಹಾಗೂ ಹೂಡಿಕೆ ವಂಚನೆ ಮೂಲಕ ಸುಮಾರು 41 ಕೋಟಿ ರೂಪಾಯಿ ಲಪಟಾಯಿಸಿರುವ ಕುಖ್ಯಾತ ವಂಚಕನನ್ನು ಕಾರವಾರ ಸೈಬರ್ ಕ್ರೈಂ ಮತ್ತು ಜಿಲ್ಲಾ ಪೊಲೀಸ್ ವಿಶೇಷ ತಂಡ ಬಂಧಿಸಿ ಕಾರವಾರಕ್ಕೆ ಕರೆ ತಂದಿದೆ.
ಬಿಹಾರ ರಾಜ್ಯದ ಪಾಟ್ನಾದ ನ್ಯೂ ಜಕನಪುರ್ ನಿವಾಸಿ ಹರ್ದೀಪ್ ಸಿಂಗ್(39) ಬಂಧಿತ ಆರೋಪಿಯಾಗಿದ್ದು ಈತ ಒಟ್ಟು 29 ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ.
ತಮಿಳುನಾಡಿನಲ್ಲಿ 9 ಕೋಟಿ , ಆಂಧ್ರಪ್ರದೇಶದಲ್ಲಿ 2.5 ಕೋಟಿ, ಬೆಂಗಳೂರು ಮಾರ್ತಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 80 ಲಕ್ಷ, ಪುಲಿಕೇಶಿ ನಗರ ವ್ಯಾಪ್ತಿಯಲ್ಲಿ 74.60 ಲಕ್ಷ,ಸೇರಿದಂತೆ ಹನ್ನೊಂದು ರಾಜ್ಯಗಳ ಬೇರೆ ಬೇರೆ ಭಾಗಗಳಲ್ಲಿ ವಂಚನೆ ನಡೆಸಿರುವುದು ತಿಳಿದು ಬಂದಿದೆ.
ಆರೋಪಿತ 2 ಚಾಲ್ತಿ ಖಾತೆ ಮತ್ತು 8 ಉಳಿತಾಯ ಖಾತೆಗಳನ್ನು ವಿವಿಧ ಬ್ಯಾಂಕುಗಳಲ್ಲಿ ಹೊಂದಿದ್ದು 2024 ರ ಅಕ್ಟೋಬರ್ 23 ರಂದು ಕಾರವಾರದ ಮುಖ್ಯ ರಸ್ತೆ ನಿವಾಸಿ ವಿಲ್ಸನ್ ಫರ್ನಾಂಡಿಸ್ ಎನ್ನುವವರಿಗೆ ಕರೆ ಮಾಡಿ ತಾನು ಮುಂಬೈ ಡಿ.ಎಚ್. ಎಲ್ ಕೋರಿಯರ್ ಕಚೇರಿಯಿಂದ ಮಾತನಾಡುತ್ತಿದ್ದು ನಿಮ್ಮ ವಿಳಾಸಕ್ಕೆ ಬಂದ ಪಾರ್ಸಲ್ ನಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು ಪೊಲೀಸ್ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದು ಸ್ವಲ್ಪ ಸಮಯದ ನಂತರ ಪೊಲೀಸ್ ಸಮವಸ್ತ್ರದಲ್ದಿ ವಿಡಿಯೋ ಕಾಲ್ ಮಾಡಿ ಪಾರ್ಸಲ್ ನಲ್ಲಿ 400 ಗ್ರಾಂ ಎಂಡಿಎಂಎ ಮಾದಕ ವಸ್ತು,,ಬೇರೆ ಬೇರೆ ಹೆಸರಿನ 7 ಪಾಸ್ ಪೋರ್ಟ್, 5 ಕ್ರೆಡಿಟ್ ಕಾರ್ಡ್ ಮತ್ತು ಬಟ್ಟೆ ದೊರಕಿದ್ದು ತನಿಖೆಗೆ ಬರುವಂತೆ ಬೆದರಿಸಿದ್ದು 3.80 ಲಕ್ಷ ಹಣವನ್ನು ಖಾತೆಗೆ ವರ್ಗಾಯಿಸಿಕೊಂಡಿದ್ದನು.
ಈ ಸಂಬಂಧಿಸಿದಂತೆ ವಿಲ್ಸನ್ ಫರ್ನಾಂಡಿಸ್ ಅವರ ಸಹೋದರ ರಾಫೆಲ್ ಎನ್ನುವವರು ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧಿಸಿದಂತೆ ಆರೋಪಿತನ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಡಿ.ವೈ.ಎಸ್. ಪಿ ಅಶ್ವಿನಿ ನೇತೃತ್ವದಲ್ಲಿ ಅಂಕೋಲಾ ಪಿ.ಎಸ್.ಐ ಉದ್ದಪ್ಪ ಧರೆಪ್ಪನವರ್ ಮತ್ತು ಸೈಬರ್ ಕ್ರೈಂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.
ಬಿಹಾರಕ್ಕೆ ತೆರಳಿದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸಿದ್ದು ಕೋಟ್ಯಾಂತರ ರೂಪಾಯಿಗಳ ವಂಚನೆ ಕುರಿತು ತಿಳಿದು ಬಂದಿದ್ದು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.