ಹೊಸದಿಗಂತ ವರದಿ ಮಡಿಕೇರಿ:
ಕಾರನ್ನು ಅತಿವೇಗ, ಅಜಾಗರೂಕತೆ ಹಾಗೂ ಅಸಂಬದ್ಧವಾಗಿ ಚಲಾಯಿಸುತ್ತಿರುವ ವಿಡಿಯೋ ತುಣುಕುಗಳನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿರುವುದನ್ನು ಗಮನಿಸಿರುವ ಪೊಲೀಸರು ಓರ್ವನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಚೋವಂಡ ರ್‍ಯಾಲಿ ಅಪ್ಪಣ್ಣ ಎಂಬವರು ಕಾರನ್ನು ಅತಿವೇಗ, ಅಜಾಗರೂಕತೆ ಹಾಗೂ ಅಸಂಬದ್ಧವಾಗಿ ಚಲಾಯಿಸುತ್ತಿರುವ ವಿಡಿಯೋ ತುಣುಕುಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಇದನ್ನು ಗಮನಿಸಿರುವ ಜಿಲ್ಲಾ ಪೊಲೀಸ್, ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಅಧಿಕಾರಿ/ಸಿಬ್ಬಂದಿಗಳು ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಬೆಟ್ಟಗೇರಿ ನಿವಾಸಿ ಚೋವಂಡ ಲೋಕೇಶ್ ಅಪ್ಪಣ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಜಪ್ತಿಗೊಳಿಸಲು ಮುಂದಾಗಿರುವ ಪೊಲೀಸರು, ಅವರ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಹಿನ್ನೆಲೆ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವುದು ಕಂಡುಬಂದಲ್ಲಿ ಮತ್ತು ರಸ್ತೆಯಲ್ಲಿ ಯಾವುದೇ ಅಪಘಾತಗಳು ಸಂಭವಿಸಿದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕೋರಿದ್ದಾರೆ.