ಹೊಸದಿಗಂತ ಡಿಜಿಟಲ್ ಡೆಸ್ಕ್:
ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ 8 ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಇದು ಬಹಳ ಸೂಕ್ಷ್ಮ ವಿಷಯವಾಗಿದೆ ಎಂದು ಹೇಳಿದೆ.
ಈಗಾಗಲೇ ಈ ಕುರಿತು ಮನವಿ ಸಲ್ಲಿಸಲಾಗಿದೆ.ಈ ಪ್ರಕರಣವು ಕಾನೂನು ಪ್ರಕ್ರಿಯೆಗೆ ಒಳಪಟ್ಟಿರುತ್ತದೆ. ಈ ಬಗ್ಗೆ ಕಂಪನಿಯ ವಕೀಲರೊಂದಿಗೂ ಮಾತನಾಡುತ್ತಿದ್ದೇವೆ. ಅಲ್ಲದೆ ನಾವು 8 ಭಾರತೀಯರಿಗೆ ನಮ್ಮ ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಕತಾರ್ ಜೊತೆಗಿನ ಈ ಪ್ರಕರಣದ ಸಂಪೂರ್ಣ ಪ್ರಕ್ರಿಯೆ ಗೌಪ್ಯವಾಗಿರುತ್ತದೆ ಎಂದು ಹೇಳಿದೆ. ಭಾರತವು ಕತಾರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಮತ್ತು ಸರ್ಕಾರವು ಭಾರತೀಯ ನಾಗರಿಕರಿಗೆ ಎಲ್ಲಾ ಕಾನೂನು ಮತ್ತು ರಾಯಭಾರ ಕಚೇರಿಯ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದರು. ಅಲ್ಲದೆ ಇದು ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ ಎಂದು ಭಾವಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಅಲ್ಲಿ ಕಾನೂನು ಪ್ರಕ್ರಿಯೆಯಲ್ಲಿದೆ . ಕತಾರ್ ನ್ಯಾಯಾಲಯದಲ್ಲಿಈ ಬಗ್ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಈ ವಿಷಯದಲ್ಲಿ ನಾವು ಕತಾರ್ ಅಧಿಕಾರಿಗಳೊಂದಿಗೆ ಸಹ ತೊಡಗಿಸಿಕೊಂಡಿದ್ದೇವೆ. ವಿಷಯದ ಸೂಕ್ಷ್ಮ ಸ್ವರೂಪದ ದೃಷ್ಟಿಯಿಂದ ಊಹಾಪೋಹಗಳಿಗೆ ಒಳಗಾಗಬೇಡಿ ಎಂದು ನಾನು ಮತ್ತೊಮ್ಮೆ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ಅಕ್ಟೋಬರ್ 26 ರಂದು ಕತಾರ್ ನ್ಯಾಯಾಲಯವು 8 ಭಾರತೀಯರಿಗೆ ಮರಣದಂಡನೆ ವಿಧಿಸಿತ್ತು. ಭಾರತವು ಈ ನಿರ್ಧಾರವನ್ನು ಆಘಾತಕಾರಿ ಎಂದು ವಿವರಿಸಿದೆ ಮತ್ತು ಈ ವಿಷಯದಲ್ಲಿ ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುವುದಾಗಿ ತಿಳಿಸಿತ್ತು. ಈ 8 ಭಾರತೀಯರು ಖಾಸಗಿ ಕಂಪನಿ ಅಲ್ ದಹ್ರಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಿ ಬೇಹುಗಾರಿಕೆ ಪ್ರಕರಣದಲ್ಲಿ ಇವರನ್ನು ಕತಾರ್ ಅಧಿಕಾರಿಗಳು ಬಂಧಿಸಿದ್ದರು.