ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ಅಜಿತ್ ಕುಮಾರ್ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಆಗಿದ್ದರೂ, ನಟನೆ ಮೀರಿ ಹಲವು ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅದರಲ್ಲಿ ಮೋಟಾರ್ ರೇಸಿಂಗ್ ಅಂದರೆ ಅವರಿಗೆ ತುಂಬಾ ಇಷ್ಟ. ಅವಕಾಶ ಸಿಕ್ಕಾಗಲೆಲ್ಲಾ ರೇಸಿಂಗ್ ತರಬೇತಿಗೆ ಸಮಯ ಮೀಸಲಿಡುತ್ತಾರೆ.
ಇದೀಗ ಇಟಲಿಯ ಸುಂದರ ನಗರವಾದ ವೆನಿಸ್‌ನಲ್ಲಿ ಅಜಿತ್‌ಗೆ ದೊಡ್ಡ ಗೌರವ ಸಿಕ್ಕಿದೆ. ವಿಶ್ವದ ಉನ್ನತ ದೇಶಗಳ ಪ್ರತಿಭಾವಂತ ರೇಸರ್‌ಗಳು ಭಾಗವಹಿಸಿದ್ದ ಅಂತಾರಾಷ್ಟ್ರೀಯ ಆಟೋಮೊಬೈಲ್ ಕಾರ್ಯಕ್ರಮದಲ್ಲಿ, ಈ ವರ್ಷದ ‘ಜೆಂಟಲ್‌ಮನ್ ಡ್ರೈವರ್’ ವಿಶೇಷ ಪ್ರಶಸ್ತಿಯನ್ನು ಅಜಿತ್ ಕುಮಾರ್‌ಗೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಎಲ್ಲರೂ ಅವರನ್ನು ವೇದಿಕೆಗೆ ಸ್ವಾಗತಿಸಿದ ಕ್ಷಣ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿತ್ತು. ಚಿತ್ರರಂಗದ ನಟರೊಬ್ಬರು ಈ ಪ್ರಶಸ್ತಿ ಪಡೆಯುತ್ತಿರುವುದು ಇದೇ ಮೊದಲು. ವೇದಿಕೆಯಲ್ಲಿ ಅವರ ರೇಸಿಂಗ್ ಸಾಧನೆಗಳ ವಿಡಿಯೋವನ್ನು ಪ್ರದರ್ಶಿಸಲಾಯಿತು. ಅದನ್ನು ನೋಡಿದ ಅನೇಕರು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಅಭಿನಂದಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಜಿತ್,’ರೇಸಿಂಗ್ ನನ್ನ ಪ್ಯಾಶನ್. ಈ ಆಸಕ್ತಿಯನ್ನು ನಿಧಾನವಾಗಿ ಬೆಳೆಸಿಕೊಂಡೆ. ನನ್ನನ್ನು ನಂಬಿ ಬೆಂಬಲಿಸಿದವರಿಗೂ ಈ ಗೌರವ ಸಲ್ಲುತ್ತದೆ’ ಎಂದರು.
ಅಜಿತ್ ಅವರ ಈ ರೇಸಿಂಗ್ ಪಯಣ ಸುಲಭವಾಗಿರಲಿಲ್ಲ. ಕೆಲವು ಸ್ಪರ್ಧೆಗಳಲ್ಲಿ ಗಾಯಗೊಂಡು ನೋವನುಭವಿಸಿದ್ದಾರೆ. ಅಡೆತಡೆಗಳ ನಡುವೆಯೂ ಅವರ ಮನೋಸ್ಥೈರ್ಯವೇ ಗೆಲುವಿಗೆ ಕಾರಣ. ಅವರ ಪತ್ನಿ ಶಾಲಿನಿ ಕೂಡ ಅವರ ಕನಸಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಜಿತ್ ತಮ್ಮ ಯಶಸ್ಸಿನ ರಹಸ್ಯ ಕುಟುಂಬ ಎಂದಿದ್ದಾರೆ.
ಜೆಂಟಲ್‌ಮನ್ ಡ್ರೈವರ್ ಪ್ರಶಸ್ತಿ
ವೆನಿಸ್‌ನಲ್ಲಿ ಸಿಕ್ಕ ‘ಜೆಂಟಲ್‌ಮನ್ ಡ್ರೈವರ್’ ಪ್ರಶಸ್ತಿಯು ಅಜಿತ್ ಅವರ ರೇಸಿಂಗ್ ವೃತ್ತಿಜೀವನದಲ್ಲಿ ಇನ್ನಷ್ಟು ಅವಕಾಶಗಳನ್ನು ತೆರೆಯುತ್ತದೆ ಎಂದು ಅಭಿಮಾನಿಗಳು ನಂಬಿದ್ದಾರೆ. ಅವರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ, ಈ ಪ್ರಶಸ್ತಿ ಅಜಿತ್ ಅವರ ಪ್ರಯತ್ನ ಮತ್ತು ರೇಸಿಂಗ್ ಮೇಲಿನ ಪ್ರೀತಿಗೆ ಸಿಕ್ಕ ದೊಡ್ಡ ಮನ್ನಣೆಯಾಗಿದೆ.

