ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ 10 ವರ್ಷಗಳಲ್ಲಿ ಭಾರತ ಅದ್ಭುತವಾದ ಅಭಿವೃದ್ಧಿ ಸಾಧಿಸಿದೆ ಎಂದು ಮೋದಿ ಅವರನ್ನು ಹಾಡಿಹೊಗಳಿದ್ದ ನಟಿ ರಶ್ಮಿಕಾ ಮಂದಣ್ಣಗೆ ನಟ ಚೇತನ್ ಟಾಂಗ್ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಹೇಳಿಕೆ ಇರುವ ಸುದ್ದಿಯ ಸ್ಕ್ರೀನ್ಶಾಟ್ ಹಂಚಿಕೊಂಡು ಚೇತನ್, ಕಳೆದ 10 ವರ್ಷಗಳಲ್ಲಿ, ‘ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ ಮತ್ತು ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲ ಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ ‘ಫ್ರೀಕಿಂಗ್ ಬ್ರಿಲಿಯಂಟ್’ ರೂಪವಾಗಿದೆ’ ಎಂದು ಚೇತನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಹೇಳಿದ್ದೇನು?
ಜನವರಿ ತಿಂಗಳಲ್ಲಿ ಪ್ರಧಾನಿ ಮೋದಿಯವರಿಂದ ಉದ್ಘಾಟನೆಗೊಂಡ ಅಟಲ್ ಸೇತು ಬಗ್ಗೆ ಹಾಗೂ ಒಟ್ಟಾರೆ ದೇಶದ ಮೂಲಸೌಕರ್ಯ ಅಭಿವೃದ್ಧಿಯಾಗುತ್ತಿರುವ ಬಗ್ಗೆ ರಶ್ಮಿಕಾ ಹೆಮ್ಮೆಯಿಂದ ಮಾತನಾಡಿದ್ದರು. ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು, ಈಗ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಅಸಾಧ್ಯವಾಗಿರೋದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈ, ಬೆಂಗಳೂರಿನಿಂದ ಮುಂಬೈ ರಸ್ತೆ ಹೀಗೆ ಪ್ರಯಾಣಿಸುವುದನ್ನು ಸುಲಭ ಮಾಡಿದ್ದಾರೆ. ಭಾರತ ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದುಮಾತನಾಡಿದ್ದರು.