ಹೊಸ ದಿಗಂತ ವರದಿ, ಮಡಿಕೇರಿ:
ದೈವ ಆರಾಧಕರು ಹಿಂದೂಗಳಲ್ಲ, ದೈವಾರಾಧನೆ ಹಿಂದೂ ಸಂಪನ್ಮೂಲದ ಭಾಗವಲ್ಲ ಎಂಬ ನಟ ಚೇತನ್ ಹೇಳಿಕೆ ಖಂಡನೀಯ ಎಂದು ತುಳು ಭಾಷಾ ಸಂಘಟಕ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಬುದ್ಧಿ ಇಲ್ಲದ ಬುದ್ಧಿಜೀವಿಯಂತೆ, ವಿಚಾರವಿಲ್ಲದ ವಿಚಾರವಾದಿಯಂತೆ ಹೇಳಿಕೆ ನೀಡಿರುವ ಚೇತನ್, ಶತಶತಮಾನಗಳಿಂದ ದೈವವನ್ನು ನಂಬಿಕೊಂಡು ಬಂದಿರುವ ಹಲವು ಜಾತಿ, ಪಂಗಡಗಳಿಗೆ ನೋವುಂಟು ಮಾಡಿದ್ದಾರೆ. ಶೋಷಿತ ಸಮುದಾಯವನ್ನು ಸಮಾಜದಿಂದ ಬೇರೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಪರಿಶಿಷ್ಟ ಜಾತಿಯ ಪರವ, ಪಂಬದ, ನಲಿಕೆ, ಮುಗೇರರು ಸೇರಿದಂತೆ ವಿವಿಧ ಜಾತಿ ಪಂಗಡಗಳ ಮಂದಿ ಸಾವಿರಾರು ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿದ್ದಾರೆ. ಹುಟ್ಟಿನಿಂದ ಸಾವಿನವರೆಗೆ ಎಲ್ಲಾ ಆಚಾರ, ವಿಚಾರಗಳನ್ನು ಹಿಂದೂ ಧರ್ಮದನ್ವಯ ನಡೆಸಿಕೊಂಡು ಬರುತ್ತಿದ್ದಾರೆ. ದೈವಾರಾಧನೆಯಲ್ಲಿ ಬರುವ ಪಾಡ್ದನದಲ್ಲಿ ಪುರಾಣ ಕಥೆಗಳಿಗೆ ಸಂಬಂಧ ಕಲ್ಪಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ದೈವದ ಕೋಲದಲ್ಲಿ ಪಾಡ್ದನ ಅತಿ ಪ್ರಮುಖ ಅಂಶವಾಗಿದೆ. ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಚೇತನ್ ಅವರು ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲವೆಂದು ಯಾವ ಆಧಾರದಲ್ಲಿ ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ದೈವಾರಾಧನೆಗೆ ಮುಂಚಿತವಾಗಿ ಶುದ್ಧದ ಹೋಮ ನಡೆಯುತ್ತದೆ. ಹೋಮ ಪ್ರಕ್ರಿಯೆ ಹಿಂದೂ ಧರ್ಮದ ಭಾಗವಾಗಿದೆ. ನರ್ತನ ಸೇವೆ, ಧೂಪ, ದೀಪ ಇಡುವುದು, ಆಹಾರ ಪದ್ಧತಿ ಎಲ್ಲವೂ ಹಿಂದೂ ಸಂಪ್ರದಾಯದಂತೆ ಈ ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು, ಹಿಂದೂ ಧರ್ಮದ ಸಂಬಂಧವನ್ನು ಎತ್ತಿ ತೋರಿಸಿದೆ.
ತುಳುನಾಡಿನ ದೈವಗಳಿಗೆ ಕಾರ್ಣಿಕ ಶಕ್ತಿ ಇದೆ ಎಂಬುದು “ಕಾಂತಾರ” ಚಿತ್ರದ ಮೂಲಕ ಜಗತ್ತಿಗೆ ಗೊತ್ತಾಗಿದೆ. ಮಾತ್ರವಲ್ಲದೆ ದೈವಾರಾಧನೆಯು ವಿಶ್ವಮಾನ್ಯವಾಗಿದೆ. ಪ್ರಕೃತಿ ಆರಾಧನೆಯೇ ದೈವಾರಾಧನೆಯಾಗಿದ್ದು, ಸನಾತನ ಹಿಂದೂ ಸಂಸ್ಕೃತಿ ಕೂಡಾ ನೆಲ, ಜಲ ಪ್ರಕೃತಿ ಸೇರಿದಂತೆ ಎಲ್ಲಾ ಕಣದಲ್ಲೂ ಭಗವಂತ ಇದ್ದಾನೆ ಎಂಬುದನ್ನು ಸಾರಿ ಹೇಳಿದೆ. ಅಲ್ಲದೆ ದೈವಾರಾಧನೆಗೂ ಹಿಂದೂ ಧರ್ಮಕ್ಕೂ ಇರುವ ಸಂಬಂಧವನ್ನು ಗಟ್ಟಿಗೊಳಿಸಿದೆ. ತುಳುನಾಡಿನ ಕಾರ್ಣಿಕದ ದೈವಗಳಾದ ಪಂಜುರ್ಲಿ, ಕೊರಗಜ್ಜ, ಕಲ್ಕುಡ, ಕಲ್ಲುರ್ಟಿ, ಪಾಷಾಣಮೂರ್ತಿ ಸೇರಿದಂತೆ ಎಲ್ಲಾ ದೈವಗಳಿಗೂ ತನ್ನದೇ ಆದ ಶಕ್ತಿಯಿದೆ. ಈ ಬಗ್ಗೆ ಕೀಳಾಗಿ ಮಾತನಾಡುವುದು ಮತ್ತು ಅಪಹಾಸ್ಯ ಮಾಡುವುದನ್ನು ದೈವ ಕ್ಷಮಿಸುವುದಿಲ್ಲ ಎಂದೂ ರವಿ ಪ್ರತಿಪಾದಿಸಿದ್ದಾರೆ.
ನಾಡಿನ ದೈವ ಸಂಸ್ಕೃತಿಯ ನಂಬಿಕೆಗಳ ಬಗ್ಗೆ ಅಧ್ಯಯನ ಮಾಡಿದವರಿಗೆ ನೈಜತೆಯ ಅರಿವಿದೆ. ಈ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿಯ ಅರಿವಿಲ್ಲದವರು ನೀಡುವ ಹೇಳಿಕೆಗಳಿಗೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಲಕ್ಷಾಂತರ ದೈವಾರಾಧಕರ ಮನಸ್ಸಿಗೆ ನೋವುಂಟು ಮಾಡಿರುವ ಚೇತನ್ ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ರವಿ ಒತ್ತಾಯಿಸಿದ್ದಾರೆ.