ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶಬರಿಮಲೆಯ ಸ್ವಾಮಿ ಅಯ್ಯಪ್ಪನ ದರುಶನಕ್ಕೆ ಸಾಲಿನಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ಮಾಲಿವುಡ್ ನಟ ದಿಲೀಪ್‌ಗೆ ದರುಶನಕ್ಕೆ ಅವಕಾಶನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳದ ಹೈಕೋರ್ಟ್, ಪೊಲೀಸ್ ಇಲಾಖೆ ಮತ್ತು ಟ್ರಾವಂಕೂರ್ ದೇವಸ್ವಂ ಬೋರ್ಡ್ (TDB) ಅನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾ. ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾ. ಮುರಳಿ ಕೃಷ್ಣ ಎಸ್ ಅವರಿಂದ ದ್ವಿಸದಸ್ಯ ಪೀಠ, ನಟನಿಗೆ ಯಾವ ಆಧಾರದ ಮೇಲೆ ವಿಶೇಷ ದರುಶನ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದೆ. ದಿಲೀಪ್ ದರುಶನ ಪಡೆದ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಪೊಲೀಸರಿಗೆ ಆದೇಶಿಸಿದೆ.
ನಟನಿಗೆ ವಿಶೇಷ ಸೌಲಭ್ಯ ನೀಡಿರುವುದರಿಂದ ಬೇರೇ ಭಕ್ತರಿಗೆ ದರುಶನಕ್ಕೆ ಅಡ್ಡಿಯಾಗುವುದಿಲ್ಲವೇ? ಭಕ್ತರ ಸಾಲಿನಲ್ಲಿ ಮಕ್ಕಳು ಮತ್ತು ವೃದ್ಧರು ಇರುತ್ತಾರೆ. ಅವರು ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲಲ್ಲು ಸಾಧ್ಯವೇ? ಅನೇಕರು ದರುಶನ ಪಡೆಯದೇ ಹಾಗೆಯೇ ತೆರಳಿದ್ದಾರೆ. ಅವರೆಲ್ಲಾ ಯಾರ ಬಳಿ ದೂರು ಸಲ್ಲಿಸಬೇಕು ಎಂದು ಪ್ರಶ್ನಿಸಿ ಕೇರಳ ಹೈಕೋರ್ಟ್ ಚಾಟಿ ಬೀಸಿದೆ.
ಡಿ.5ರಂದು ನಟ ದಿಲೀಪ್‌ಗೆ ನೀಡಿದ ವಿಶೇಷ ದರುಶನದಿಂದ ಕಾನೂನು ಉಲ್ಲಂಘನೆ ಆಗಿದೆ ಎಂದು ಅಭಿಪ್ರಾಯಪಟ್ಟಿದೆ.
ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ದೇವರ ದರುಶನಕ್ಕಾಗಿ ಹಲವು ಗಂಟೆಗಳ ಕಾಲ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಈ ವೇಳೆ ಸೇರಿದ್ದ ಭಕ್ತರನ್ನು ತಡೆದು ದಿಲೀಪ್‌ಗೆ ವಿಶೇಷ ಪೂಜೆ ಸಲ್ಲಿಸಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.