ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹೇಶ್ ಬಾಬು ಸ್ಟಾರ್ ನಟ ಮಾತ್ರವೇ ಅಲ್ಲ, ಉದ್ಯಮಿ ಸಹ, ಹಲವು ಉದ್ಯಮಗಳಲ್ಲಿ ಮಹೇಶ್ ಬಾಬು ಹೂಡಿಕೆ ಮಾಡಿದ್ದಾರೆ. ಹಲವು ಚಿತ್ರಮಂದಿರಗಳನ್ನು ಸಹ ಮಹೇಶ್ ಬಾಬು ಹೊಂದಿದ್ದಾರೆ. ಇದೀಗ ತಮ್ಮ ಉದ್ಯಮವನ್ನು ಬೆಂಗಳೂರಿಗೂ ವಿಸ್ತರಿಸಿದ್ದಾರೆ ಮಹೇಶ್ ಬಾಬು.
ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಈಗಾಗಲೇ ಹೈದರಾಬಾದ್ ಸೇರಿದಂತೆ ಕೆಲವೆಡೆ ಅತ್ಯುತ್ತಮ ಸಿನಿಮಾ ಅನುಭವವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಎಎಂಬಿ ಸಿನಿಮಾಸ್ ಮಲ್ಟಿಪ್ಲೆಕ್ಸ್ ಮಾದರಿಯ ಚಿತ್ರಮಂದಿರವಾಗಿದ್ದು ಸಿನಿಮಾ ಜೊತೆಗೆ ಊಟ-ಉಪಹಾರಗಳ ಸೇವೆಯನ್ನೂ ಸಹ ನೀಡುತ್ತದೆ. ಇದೀಗ ಈ ಎಎಂಬಿ ಸಿನಿಮಾಸ್ ಬೆಂಗಳೂರಿನಲ್ಲಿ ಪ್ರಾರಂಭ ಆಗುತ್ತಿದೆ. ಅದೂ ಬೆಂಗಳೂರಿನ ಐತಿಹಾಸಿಕ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ತಮ್ಮ ಹೊಸ ಚಿತ್ರಮಂದಿರವನ್ನು ಪ್ರಾರಂಭಿಸುತ್ತಿದ್ದಾರೆ.
ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಚಿತ್ರಮಂದಿರ ಮತ್ತು ಮೊಟ್ಟ ಮೊದಲ ಸಿನೆರಾಮ್ ತಂತ್ರಜ್ಞಾನ ಹೊಂದಿದ್ದ ಚಿತ್ರಮಂದಿರವಾಗಿದ್ದ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲಿಯೇ ಮಹೇಶ್ ಬಾಬು ಅವರ ಹೊಸ ಚಿತ್ರಮಂದಿರ ಪ್ರಾರಂಭ ಆಗುತ್ತಿದೆ. ಈಗ ಪ್ರಾರಂಭ ಆಗುತ್ತಿರುವ ಚಿತ್ರಮಂದಿರಕ್ಕೆ ‘ಎಎಂಬಿ ಸಿನಿಮಾಸ್ ಕಪಾಲಿ’ ಎಂದೇ ಹೆಸರಿಡಲಾಗಿದೆ. ಆ ಮೂಲಕ ಕಪಾಲಿ ನೆನಪನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಮಹೇಶ್ ಬಾಬು. ಡಿಸೆಂಬರ್ 16 ರಂದು ಈ ಹೊಸ ಚಿತ್ರಮಂದಿರದ ಉದ್ಘಾಟನೆ ನಡೆಯಲಿದ್ದು, ಮಹೇಶ್ ಬಾಬು ಸಹ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

