Sunday, December 14, 2025

ನಟ ರಣವೀರ್ ಸಿಂಗ್ ನಿಂದ ದೈವದ ಅನುಕರಣೆ: ಕೊನೆಗೂ ಮೌನ ಮುರಿದ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾ ಸಿನಿಮೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡುತ್ತಾ ದೈವದ ಅನುಕರಣೆ ಮಾಡಿದ್ದರು. ‘ದೈವ’ವನ್ನು ದೆವ್ವ ಎಂದು ಕರೆದಿದ್ದರು. ಸಿಂಗ್ ಅವರ ಕೆಟ್ಟ ಅನುಕರಣೆ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ದೂರುಗಳು ಸಹ ದಾಖಲಾಗಿದ್ದವು. ಆದರೆ ರಿಷಬ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ.

ಚೆನ್ನೈನಲ್ಲಿ ನಡೆದ ಬಿಹೈಂಡ್ ವೂಡ್ಸ್ ಗೋಲ್ಡ್ ಮೆಡಲ್ ಕಾರ್ಯಕ್ರಮದಲ್ಲಿ ಗೋಲ್ಡ್ ಮೆಡಲ್ ಸ್ವೀಕರಿಸಿದ ರಿಷಬ್ ಶೆಟ್ಟಿ, ದೈವದ ಅನುಕರಣೆಯ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್ ಶೆಟ್ಟಿ, ‘ಕಾಂತಾರ’ ಸಿನಿಮಾದ ಆಚರಣೆ ನಮ್ಮ ಮನೆಗೆ ನಮ್ಮ ಸಮುದಾಯದ, ಪ್ರಾಂತ್ಯಕ್ಕೆ ಸೇರಿದ ಆಚರಣೆ. ನಾನು ನೋಡಿದ್ದು, ಕೇಳಿದ್ದ ಕತೆಗಳನ್ನೇ ನಾನು ಸಿನಿಮಾ ಮಾಡಿದ್ದೇನೆ. ನಾನು ಸ್ವತಃ ದೈವವನ್ನು ನಂಬುವವ, ಆಚರಿಸುವವ ಹಾಗಾಗಿ ನನಗೆ ಅದು ಅತ್ಯಂತ ಪವಿತ್ರವಾದುದು’ ಎಂದಿದ್ದಾರೆ.

‘ಪಾಪ್ ಕಲ್ಚರ್​​ನಲ್ಲಿ ಹೇಗಾಗಿ ಬಿಡುತ್ತದೆ ಎಂದರೆ, ಸಿನಿಮಾನಲ್ಲಿ ತೋರಿಸಲಾಗಿದೆ ಎಂದ ಕೂಡಲೇ ಅದನ್ನು ಅನುಕರಣೆ ಮಾಡುವುದು, ವೇದಿಕೆಗೆ ತೆಗೆದುಕೊಂಡು ಹೋಗುವುದು, ವೇದಿಕೆ ಮೇಲೆ ಪ್ರದರ್ಶನ ಮಾಡುವುದು. ರೀಲ್ಸ್ ಮಾಡುವುದು, ಅನುಕರಣೆ ಮಾಡುವುದು, ಅವಹೇಳನ ಮಾಡುವುದು ಮಾಡಲಾಗುತ್ತದೆ. ಅದು ನನಗೆ ಬೇಸರ ಮೂಡಿಸುತ್ತವೆ. ಏಕೆಂದರೆ ಅದು ಕೇವಲ ಸಿನಿಮಾ ಮಾತ್ರವಲ್ಲ, ನಮ್ಮ ನಂಬಿಕೆ ಸಹ’ ಎಂದಿದ್ದಾರೆ ರಿಷಬ್ ಶೆಟ್ಟಿ.

‘ನಾವು ಸಿನಿಮಾ ಮಾಡಬೇಕಾದರೂ ಸಹ ಹಿರಿಯರನ್ನು, ದೈವದ ಬಗ್ಗೆ ಜ್ಞಾನಿಗಳನ್ನು ಆಹ್ವಾನಿಸಿ, ಅವರೊಂದಿಗೆ ಪ್ರತಿ ಹೆಜ್ಜೆಯನ್ನೂ ಚರ್ಚಿಸಿ, ದೈವಕ್ಕೆ, ಆಚರಣೆಗೆ, ನಂಬಿಕೆಗೆ ಎಲ್ಲೂ ಮುಕ್ಕಾಗದ ರೀತಿಯಲ್ಲಿ ನೇಮ ಮಾಡಿ ಸಿನಿಮಾ ಮಾಡಿದ್ದೇವೆ. ಇದೇ ಕಾರಣಕ್ಕೆ ನಾನು ಹೋದಲ್ಲೆಲ್ಲ, ದೈವವನ್ನು ಅನುಕರಣೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ. ‘ಕಾಂತಾರ’ ಸಿನಿಮಾದ ಎಲ್ಲ ದೃಶ್ಯಗಳೂ ಸಿನಿಮಾ ಎಂಬುದು ನಿಜ ಆದರೆ ದೈವದ ದೃಶ್ಯಗಳು ಕೇವಲ ಸಿನಿಮಾ ಮಾತ್ರವಲ್ಲ, ಅದು ನಮ್ಮ ನಂಬಿಕೆ’ ಎಂದಿದ್ದಾರೆ ರಿಷಬ್ ಶೆಟ್ಟಿ.

error: Content is protected !!