ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕರೂರಿನಲ್ಲಿ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಆಯೋಜಿಸಿದ್ದ ಚುನಾವಣಾ ಪ್ರಚಾರದ ರ‍್ಯಾಲಿಯ ವೇಳೆ ಕಾಲ್ತುಳಿತ ಉಂಟಾಗಿ 41 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಬಾರಿ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ.
ದೀಪಾವಳಿಗೆ ದಿನಗಣನೆ ಆರಂಭವಾಗಿದ್ದು, ದೇಶದಲ್ಲೆಡೆ ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಚೆನ್ನೈ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ನಗರದಾದ್ಯಂತ ಕಟ್ಟಡಗಳು ದೀಪಗಳಿಂದ ಬೆಳಗುತ್ತಿವೆ. ಆದರೆ ಚೆನ್ನೈಯ ಪನೈಯೂರ್‌ನಲ್ಲಿರುವ ವಿಜಯ್ ಅವರ ಟಿವಿಕೆ ಪ್ರಧಾನ ಕಚೇರಿಯು ಬಿಕೋ ಎನ್ನುತ್ತಿದೆ. ಅದಕ್ಕೆ ಕಾರಣ ವಿಜಯ್ ಅವರ ನಿರ್ಧಾರ. ಈಗಾಗಲೇ ವಿಜಯ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಕಾರ್ಯಕರ್ತರಿಗೆ ಮತ್ತು ಜಿಲ್ಲಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ, ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರ ಸ್ಮರಣಾರ್ಥ ಈ ವರ್ಷ ದೀಪಾವಳಿ ಆಚರಿಸದಂತೆ ಹೇಳಿದ್ದಾರೆ.
ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಸುಮಾರು 30,000 ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯರು, ಮಕ್ಕಳು ಅಸುನೀಗಿದ್ದರು. ದುರಂತದ ಸುದ್ದಿ ಗೊತ್ತಾಗುತ್ತಿದ್ದಂತೆ ದುಃಖ ವ್ಯಕ್ತಪಡಿಸಿದ್ದ ವಿಜಯ್ ಹೃದಯ ಚೂರಾಗಿದೆ ಎಂದಿದ್ದರು.