ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್ ಅವರು ಹೋದಲ್ಲೆಲ್ಲಾ ಅವರ ಅಭಿಮಾನಿಗಳಿಂದ ಗುಂಪುಗೂಡುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಇಂತಹ ಹಲವು ಘಟನೆಗಳು ನಡೆದಿವೆ. ಯಶ್ ಹುಟ್ಟುಹಬ್ಬದ ಕಹಿ ನೆನಪುಗಳು ಇನ್ನೂ ಹಾಗೆಯೆ ಇದೆ ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ನಟ ಯಶ್ ಬೆಂಗಾವಲು ವಾಹನ ಹರಿದು ಅಭಿಮಾನಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್ನಲ್ಲಿ ಈ ಘಟನೆ ನಡೆದಿದೆ.
ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಾಲಯವನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಇಲ್ಲಿಗೆ ಯಶ್ ಆಗಮಿಸಿದ್ದಾರೆ, ಯಶ್ ಆಗಮನದ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಯಶ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಕಾರು ಹರಿದಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.