ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಹಾಗೂ ವೈದ್ಯೆಯಾಗಿ ಗುರುತಿಸಿಕೊಂಡಿರುವ ಶ್ರೀಲೀಲಾ ಅವರ ಇತ್ತೀಚಿನ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯರ ಋತುಚಕ್ರದ ಬಗ್ಗೆ ಅವರು ಕಾರ್ಯಕ್ರಮವೊಂದರಲ್ಲಿ ಹಂಚಿಕೊಂಡ ಅಭಿಪ್ರಾಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ, ಶೂಟಿಂಗ್ ಸಮಯದಲ್ಲಿ ಪೀರಿಯಡ್ಸ್ ಸಮಸ್ಯೆ ಎದುರಾದ ಸಂದರ್ಭಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಶ್ರೀಲೀಲಾ ಉತ್ತರಿಸಿದ್ದರು. ಮುಟ್ಟು ಮಹಿಳೆಗೆ ನೆಪವಾಗಬಾರದು, ಆ ಸಮಯದಲ್ಲೂ ತಮಗೆ ತಾವೇ ಧೈರ್ಯ ತುಂಬಿಕೊಂಡು ಮುಂದೆ ಸಾಗಬೇಕು ಎಂಬ ಅರ್ಥದ ಮಾತುಗಳನ್ನು ಅವರು ಹೇಳಿದ್ದಾರೆ ಎನ್ನಲಾಗಿದೆ. ತಮ್ಮ ಹಿಟ್ ಹಾಡುಗಳ ಚಿತ್ರೀಕರಣದ ವೇಳೆ ತಮಗೂ ಋತುಸ್ರಾವ ಇತ್ತು ಎಂದು ಉದಾಹರಣೆ ನೀಡಿದ್ದರು.
ಇದನ್ನೂ ಓದಿ:
ಈ ಹೇಳಿಕೆಗೆ ಕೆಲವರು ಮೆಚ್ಚುಗೆ ಸೂಚಿಸಿದ್ದು, ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು ಸವಾಲುಗಳನ್ನು ಎದುರಿಸಬೇಕು ಎಂಬ ಸಂದೇಶ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನೊಂದು ವಲಯ ತೀವ್ರ ಟೀಕೆ ವ್ಯಕ್ತಪಡಿಸಿದೆ. ಪ್ರತಿಯೊಬ್ಬ ಮಹಿಳೆಯ ದೈಹಿಕ ಸ್ಥಿತಿ ವಿಭಿನ್ನವಾಗಿದ್ದು, ಕೆಲವರಿಗೆ ಆ ದಿನಗಳಲ್ಲಿ ತೀವ್ರ ನೋವು, ದೌರ್ಬಲ್ಯ ಮತ್ತು ಮಾನಸಿಕ ಒತ್ತಡ ಎದುರಾಗುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಶೇಷವಾಗಿ ವೈದ್ಯೆಯಾಗಿ ಅವರು ಮಾತನಾಡಿರುವುದರಿಂದ ಹೆಚ್ಚು ಜವಾಬ್ದಾರಿಯುತ ಹೇಳಿಕೆ ನೀಡಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಎಲ್ಲರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ, ಎಲ್ಲರಿಗೂ “push ಮಾಡಿಕೊಳ್ಳಿ” ಎನ್ನುವುದು ಸೂಕ್ತ ಸಂದೇಶವಲ್ಲ ಎಂದು ಹಲವರು ಹೇಳಿದ್ದಾರೆ.
ಈ ಹೇಳಿಕೆ ಇದೀಗ ಮಹಿಳಾ ಆರೋಗ್ಯ, ವೈಯಕ್ತಿಕ ಅನುಭವ ಮತ್ತು ಸಾಮಾಜಿಕ ನಿರೀಕ್ಷೆಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.



