ಹೊಸದಿಗಂತ ಡಿಜಿಟಲ್ ಡೆಸ್ಕ್:
ಏರ್ ಇಂಡಿಯಾ ವಿಮಾನದಲ್ಲಿ ಮಲೆಯಾಳಿ ನಟಿಗೆ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದು, ಈ ಘಟನೆ ಕುರಿತಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿಯೂ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಮಲಯಾಳಂ ನಟಿ ದಿವ್ಯ ಪ್ರಭಾ ಅಕ್ಟೋಬರ್ 9 ರಂದು ಮುಂಬೈನಿಂದ ಕೊಚ್ಚಿಗೆ ಬರಲು ಏರ್ ಇಂಡಿಯಾ ವಿಮಾನ AI 681 ಅನ್ನು ಹತ್ತಿದ್ದರು. ಕುಡಿದ ಮತ್ತಿನಲ್ಲಿದ್ದ ಸಹಪ್ರಯಾಣಿಕ ಆಕೆಗೆ ಕಿರುಕುಳ ನೀಡಿದ್ದು, ಆಕೆ ಗಗನಸಖಿಯ ಬಳಿ ದೂರು ನೀಡಿದ್ದಾರೆ. ಟೇಕ್ ಆಫ್ ಆಗುವ ಮುನ್ನ ವಿಮಾನ ಸಿಬ್ಬಂದಿ ಆಕೆಯನ್ನು ಮತ್ತೊಂದು ಸೀಟಿಗೆ ಸ್ಥಳಾಂತರಿಸಿದ್ದಾರೆ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ದಿವ್ಯ ಪ್ರಭಾ ತನಗೆ ಎದುರಾದ ತೊಂದರೆ ಬಗ್ಗೆ ಏರ್‌ಲೈನ್ಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಂತರ ದೂರಿನ ಪ್ರತಿ ಜೊತೆಗೆ ತಮ್ಮ ಟಿಕೆಟ್ ಲಗತ್ತಿಸಿ ಕೇರಳ ಪೊಲೀಸರಿಗೆ ಕೊಟ್ಟಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ನೀವೆಲ್ಲರೂ ನನಗೆ ಸಹಾಯ ಮಾಡಬೇಕು ಎಂದು ಇನ್ಸ್ಟಾಗ್ರಾಂ ಖಾತೆ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.