ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ನಟಿ ಹರ್ಷಿಕಾ ಪೂಣಚ್ಚ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 2023, ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ವರ್ಷದೊಳಗೆ ಗುಡ್‌ನ್ಯೂಸ್ ನೀಡಿದ್ದಾರೆ.
ಇದೀಗ ಜೋಡಿ ಇಷ್ಟು ಬೇಗ ಮಗುನಾ? ಸಿನಿಮಾರಂಗ ಬಿಟ್ಟು ಬಿಡುತ್ತೀರಾ? ಎಂದೆಲ್ಲಾ ಪ್ರಶ್ನೆ ಮಾಡುವವರಿಗೆ ಮಾಧ್ಯಮಗಳ ಮುಂದೆ ಉತ್ತರ ಕೊಟ್ಟಿದ್ದಾರೆ.
ಭುವನ್ ಪೊನ್ನಣ್ಣ ಮಾತನಾಡಿ ‘ತುಂಬ ಖುಷಿ ಇದೆ. ಈಗಿನ ಸನ್ನಿವೇಶದಲ್ಲಿ ಹೇಳೋದು ಏನೆಂದರೆ, ಈಗಿನ ಸಮಯದಲ್ಲಿ ಹಲವಾರು ಜನ ಫ್ಯಾಮಿಲಿ ಪ್ಲ್ಯಾನಿಂಗ್ ಎಂದುಕೊಂಡು ಮದುವೆಯಾಗಿ 5-10 ವರ್ಷ ಮಕ್ಕಳು ಮಾಡಿಕೊಳ್ಳದೇ ಹಾಗೇ ಇರ್ತಾರೆ. ನನ್ನ ಪ್ರಕಾರ ತಪ್ಪು. ಮದುವೆಯಾದ ಕೂಡಲೇ ಮಕ್ಕಳು ಮಾಡಿಕೊಳ್ಳಿ. ಈಗಿನ ಪೊಲಿಟಿಕಲ್ ಸಂದರ್ಭಗಳನ್ನು ನೋಡಿದರೆ, ಜಗತ್ತು ಎಷ್ಟು ದಿವಸ ಇರುತ್ತೋ ಇಲ್ಲವೋ ಗೊತ್ತಿಲ್ಲ. ಇದಷ್ಟು ದಿನ ಖುಷಿಯಾಗಿರಿ’ ಎಂದರು.
ಇನ್ನು ನಟಿ ಹರ್ಷಿಕಾ ಮಾತನಾಡಿ ‘ಭುವನ್ ಅವರ ನಿರ್ಧಾರವೇ ನನ್ನದೂ ಆಗಿತ್ತು. ಸಾಕಷ್ಟು ವರ್ಷ ನಾವು ಸ್ನೇಹಿತರಾಗಿ ಆಮೇಲೆ ಮದುವೆ ಆದ್ವಿ. ನಮ್ಮ ನಿರ್ಧಾರ ಅದೇ ಇತ್ತು. ದೇವರು ಮಕ್ಕಳು ಕೊಟ್ಟರೆ ಮಾಡಿಕೊಳ್ಳಬೇಕು ಎಂದೇ ಇತ್ತು. ದೇವರ ಆಶೀರ್ವಾದಿಂದ ಒಳ್ಳೆಯದು ಆಗಿದೆ. ಮುಂದೆ ಸಿನಿಮಾ ಮಾಡುತ್ತೇನೆ. ತಾಯಿಯಾಗಿ ಮಗುವಿಗೆ ಎಷ್ಟು ಸಮಯ ಕೊಡಬೇಕು ಅಷ್ಟು ಕೊಡುತ್ತೇನೆ. ಅದರ ನಂತರ ಸಿನಿಮಾ ಮಾಡೋದು ಇದ್ದೇ ಇದೆ’ ಎಂದರು.
ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅನೇಕ ವರ್ಷಗಳ ಸ್ನೇಹಿತರು. ಈ ಸ್ನೇಹ ಪ್ರೀತಿಗೆ ತಿರುಗಿ ಕಳೆದ ವರ್ಷ ಹಸೆಮಣೆ ಏರಿದ್ದರು. ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್ ಕೊಡವ ಶೈಲಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.