ಹೊಸದಿಗಂತ ಡಿಜಿಟಲ್ ಡೆಸ್ಕ್ :
ನಟಿ ಮತ್ತು ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಪ್ರಸ್ತುತ ಬಂಧನಕ್ಕೊಳಗಾಗಿರುವ ಮತ್ತೋರ್ವ ಆರೋಪಿಯನ್ನು ಕೊಪ್ಪಳದ ಮಂಜುನಾಥ್ ಎಂದು ಗುರುತಿಸಲಾಗಿದೆ. ಇದಕ್ಕೂ ಮೊದಲು ಪೊಲೀಸರು ಟಿ ಓಬಣ್ಣ, ಗಂಗಾಧರ್, ರಾಜೇಶ್ ಮತ್ತು ಭುವನ್ ಗೌಡ ಎಂಬುವವರನ್ನು ಬಂಧಿಸಿದ್ದರು.
ಇತ್ತೀಚೆಗೆ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಪರ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡಿದ್ದರು. ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗ ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ಭರವಸೆ ಇದೆ ಎಂದು ಹೇಳಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ದರ್ಶನ್ ಅಭಿಮಾನಿಗಳು ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಅಶ್ಲೀಲವಾಗಿ ಕಮೆಂಟ್ಗಳನ್ನು ಮಾಡಿದ್ದರು. ಹೀಗಾಗಿ, ರಮ್ಯಾ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೈಬರ್ ಠಾಣೆಗೆ ದೂರು ನೀಡಿದ್ದರು.