ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಅಕ್ರಮ ಸಾಗಾಟ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್, ಉದ್ಯಮಿ ತರುಣ್ ರಾಜ್ ಮತ್ತು ಸಾಹಿಲ್ ಜೈನ್‌ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖಭಂಗವಾಗಿದೆ. “ನಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ, ತಕ್ಷಣ ಬಿಡುಗಡೆ ಮಾಡಿ” ಎಂದು ಕೋರಿ ಇವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಹಾಗೂ ವಿಜಯ್ ಕುಮಾರ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಬಂಧನ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಮತ್ತು ತನಿಖಾ ಸಂಸ್ಥೆಗಳು ನಿಯಮಾನುಸಾರವೇ ಕ್ರಮ ಕೈಗೊಂಡಿವೆ ಎಂದು ಸ್ಪಷ್ಟಪಡಿಸಿದ ಪೀಠ, ಆರೋಪಿಗಳ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.
2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ಬಳಿ 14.8 ಕೆಜಿ ಚಿನ್ನ ಪತ್ತೆಯಾಗಿತ್ತು. ಡಿಆರ್‌ಐ ನಡೆಸಿದ ಆಳವಾದ ತನಿಖೆಯಲ್ಲಿ ಈ ಜಾಲವು ಇದುವರೆಗೆ ಸುಮಾರು 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಡಿಆರ್‌ಐ ಈಗಾಗಲೇ 250 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಬರೋಬ್ಬರಿ 102 ಕೋಟಿ ರೂ. ದಂಡ ವಿಧಿಸಿದೆ. ಅತ್ತ ಜಾರಿ ನಿರ್ದೇಶನಾಲಯ ಸಹ ಅಖಾಡಕ್ಕಿಳಿದು 34 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಈ ಪ್ರಕರಣದಲ್ಲಿ ಹೋಟೆಲ್ ಉದ್ಯಮಿ ತರುಣ್ ಕೊಂಡರಾಜು ಹಾಗೂ ಜ್ಯುವೆಲ್ಲರಿ ವ್ಯಾಪಾರಿಗಳಾದ ಸಾಹಿಲ್ ಮತ್ತು ಭರತ್ ಜೈನ್ ಪ್ರಮುಖ ಆರೋಪಿಗಳಾಗಿದ್ದು, ತನಿಖೆ ಮುಂದುವರಿದಿದೆ. ಸದ್ಯಕ್ಕೆ ಹೈಕೋರ್ಟ್ ಆದೇಶದಿಂದಾಗಿ ಆರೋಪಿಗಳು ಜೈಲಿನಲ್ಲೇ ದಿನ ಕಳೆಯುವಂತಾಗಿದೆ.

