ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನಿಯಂತ್ರಣ ಸಮಿತಿ ಆದೇಶದ ಹಿನ್ನೆಲೆ ತಮಿಳುನಾಡಿಗೆ ರಾಜ್ಯ ಸರ್ಕಾರ ಹೆಚ್ಚುವರಿ ನೀರು ಬಿಡುಗಡೆ ಮಾಡುತ್ತಿದೆ. ರೈತರ ಪ್ರತಿಭಟನೆಯ ನಡುವೆಯೂ ಶ್ರೀರಂಗಪಟ್ಟಣದ ಕೆಆರ್‌ಎಸ್ ಜಲಾಶಯದಿಂದ ಬುಧವಾರ ರಾತ್ರಿ 7,279 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಿದ್ದಾರೆ.
ರಾಜ್ಯ ಸರ್ಕಾರದ ಕ್ರಮವನ್ನು ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಜಗ್ಗದ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನೀರು ಹರಿಸಿ ಜಲಾಶಯದ ನೀರಿನ ಮಟ್ಟವನ್ನು ಕಡಿಮೆ ಮಾಡುತ್ತಿದೆ. ಮಂಗಳವಾರ ರಾತ್ರಿಯಿಂದ 4448 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಇದೀಗ ಏಕಾಏಕಿ ಹರಿವಿನ ಪ್ರಮಾಣ ಹೆಚ್ಚಳ ಮಾಡಿದ್ದು, ಡ್ಯಾಂನ ನೀರಿನ ಮಟ್ಟ 100ಅಡಿಗೆ ಕುಸಿದಿದೆ.
ಹೀಗೆ ಮುಂದುವರಿದರೆ ಈಗಾಗಲೇ ಮಳೆಯಿಲ್ಲದೆ ಕಂಗೆಟ್ಟಿರುವ ರೈತರಿಗೆ ಕಾವೇರಿಯ ಕೊರತೆಯೂ ಉಂಟಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯ ಸರ್ಕಾರದ ಈ ಕ್ರಮವನ್ನು ಖಂಡಿಸಿ ರೈತರ ಪ್ರತಿಭಟನೆ ಕೂಡ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಂದು ಹೋರಾಟದ ರೂಪುರೇಷೆ ಬಗ್ಗೆ ಸಭೆ ನಡೆಸಲು ರೈತರು ಮುಂದಾಗಿದ್ದಾರೆ.