ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಆದಿಪುರುಷ್’ (Adipurush) ಸಿನಿಮಾ ಬಿಡುಗಡೆ ಬೆನ್ನಲ್ಲೇ ವಿವಾದಗಳು ಸುತ್ತಿಕೊಂಡಿದ್ದು, ಸಿನಿಮಾದಲ್ಲಿ ಬಳಕೆ ಆಗಿರುವ ಭಾಷೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ.
ಈ ನಡುವೆ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಶೀರ್ (Manoj Muntashir) ಅವರಿಗೆ ಕೆಲವರು ಕೊಲೆ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.
‘ಆದಿಪುರುಷ್’ ಸಿನಿಮಾದಲ್ಲಿ ಆಂಜನೇಯನ ಪಾತ್ರಕ್ಕೆ ಮನೋಜ್ ಮುಂತಶೀರ್ ಬರೆದ ಸಂಭಾಷಣೆಗಳು ತೀರಾ ಕಳಪೆ ಆಗಿವೆ ಎಂದು ಅನೇಕರು ದೂರಿದ್ದಾರೆ. ಅಲ್ಲದೇ ‘ನಾವು ರಾಮಾಯಣ ಆಧರಿಸಿ ಈ ಸಿನಿಮಾ ಮಾಡಿಲ್ಲ’ ಎಂದು ಮನೋಜ್ ಅವರು ಮಾತು ಬದಲಿಸಿದ್ದು ಕೂಡ ಜನರ ಕೋಪಕ್ಕೆ ಕಾರಣ ಆಗಿದೆ.
ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಕ್ಷತ್ರಿಯಾ ಕರ್ಣಿ ಸೇನಾದವರು ಸುದ್ದಿಗೋಷ್ಠಿ ನಡೆಸಿ ‘ಆದಿಪುರುಷ್’ ಸಿನಿಮಾದ ಸಂಭಾಷಣಕಾರ ಮನೋಜ್ ಮುಂತಶೀರ್ ಹಾಗೂ ನಿರ್ದೇಶಕ ಓಂ ರಾವತ್ ಅವರನ್ನು ಕೊಲೆ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮನೋಜ್ ಮುಂತಶೀರ್ ಅವರು ಭದ್ರತೆಗಾಗಿ ಪೊಲೀಸರ ಬಳಿ ಮನವಿ ಮಾಡಿಕೊಂಡರು. ಹಾಗಾಗಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.
ದೇಶಾದ್ಯಂತ ‘ಆದಿಪುರುಷ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕೂಡ ಕೆಲವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.