March 5, 2026
Thursday, March 5, 2026
spot_img

ಬಿಸಿಲ ನಗರಿಯ ಟೆನಿಸ್ ಕೋರ್ಟ್‌ನಲ್ಲಿ ‘ಅಡ್ಕರ್-ರೈನಾ’ ಪಾರುಪತ್ಯ: ಸೆಮಿಫೈನಲ್‌ಗೆ ಪಾದಾರ್ಪಣೆ

ಹೊಸದಿಗಂತ ಕಲಬುರಗಿ:

ಬಿಸಿಲ ನಗರಿಯ ಸುಡುವ ಬಿಸಿಲನ್ನೂ ಲೆಕ್ಕಿಸದೆ ಅಪ್ರತಿಮ ಪ್ರದರ್ಶನ ನೀಡಿದ ಭಾರತದ ಟೆನಿಸ್ ತಾರೆಗಳಾದ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ, ಇಲ್ಲಿನ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸತತ ಜಯಭೇರಿ ಬಾರಿಸಿದ್ದಾರೆ. ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಈ ಜೋಡಿ, ಡಬಲ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಬೆಳಿಗ್ಗೆ ನಡೆದ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತೀಯ ಆಟಗಾರ್ತಿಯರು ಎದುರಾಳಿಗಳನ್ನು ಸುಲಭವಾಗಿ ಮಣಿಸಿದರು.

ವೈಷ್ಣವಿ ಅಡ್ಕರ್: ರಷ್ಯಾದ ಅನ್ನಾ ಸೇಡಿಶೇವಾ ವಿರುದ್ಧ 6-2, 6-0 ಅಂತರದ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ತಲುಪಿದರು.

ಅಂಕಿತಾ ರೈನಾ: ಮಿಲಾನಾ ಮಸ್ಲೋಕೋವಾ ವಿರುದ್ಧ 6-2, 6-1 ಸೆಟ್‌ಗಳಿಂದ ಜಯದ ರಥ ಎಳೆದು ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆದರು.

ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ನಡೆದ ಡಬಲ್ಸ್ ಪಂದ್ಯದಲ್ಲಿ ವೈಷ್ಣವಿ ಮತ್ತು ಅಂಕಿತಾ ಜೋಡಿ ಅಮೋಘ ಸಮನ್ವಯತೆ ಪ್ರದರ್ಶಿಸಿತು. ಕೋರ್ಟ್ ೩ರಲ್ಲಿ ನಡೆದ ಹಣಾಹಣಿಯಲ್ಲಿ ಇವ್ಗೆನಿಯಾ ಬುರ್ಡಿನಾ ಮತ್ತು ಸೋಫಿಯಾ ಮಾರ್ಟಿಯಾನೋವಾ ಜೋಡಿಯನ್ನು 6-2, 6-2 ನೇರ ಸೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಪಾದಾರ್ಪಣೆ ಮಾಡಿದರು.

ಸೋನಲ್ ಪಾಟೀಲ್/ಬೇಲಾ ತಂಹಾಂಕರ ಜೋಡಿಯು ಕರ್ನಾಟಕದ ಸ್ನಿಗ್ಧಾ ಕಾಂತಾ ಮತ್ತು ಹರ್ಷಿಣಿ ಎನ್ ನಾಗರಾಜ್ ವಿರುದ್ಧ 7-5, 6-2 ರಿಂದ ಜಯಗಳಿಸಿತು.

ಶ್ರಾವ್ಯ ಶಿವಾನಿ ಚಿಲಕಲಪೂಡಿ/ಮಿಚಿಕಾ ಒಝೆಕಿ ಜೋಡಿಯು ಝೀಲ್ ದೇಸಾಯಿ ಮತ್ತು ಎಲಿನಾ ನೆಪ್ಲಿಯ ವಿರುದ್ಧ 7-5, 2-6, [10-6] ಅಂತರದಲ್ಲಿ ರೋಚಕ ಗೆಲುವು ದಾಖಲಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !