March 11, 2026
Wednesday, March 11, 2026
spot_img

ಕೊಂಕಣ ರೈಲ್ವೆ ಸಾಮರ್ಥ್ಯ ಬಲವರ್ದನೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ: ಶೀಘ್ರವೇ ವಿಸ್ತೃತ ಯೋಜನಾ ವರದಿ


ಹೊಸದಿಗಂತ ಡಿಜಿಟಲ್ ಡೆಸ್ಕ್:


ಕೊಂಕಣ ರೈಲ್ವೆ ವಲಯ ಭಾಗದಲ್ಲಿ ಜೋಡಿ ಮಾರ್ಗ ನಿರ್ಮಾಣ, ರೈಲು ಹಳಿ ಬಲಪಡಿಸುವುದು ಸೇರಿದಂತೆ ಒಟ್ಟು ಸಾಮರ್ಥ್ಯ ಬಲವರ್ಧನೆಗೆ ವಿಸ್ತೃತ ಯೋಜನಾ ವರದಿ ರೂಪಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದ್ದಾರೆ.


ಪ್ರಶ್ನೋತ್ತರ ಅವಧಿಯಲ್ಲಿಂದು ಉತ್ತರ ನೀಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ ರಾಜ್ಯಗಳು ಕೊಂಕಣ ರೈಲ್ವೆ ವಲಯದ ಭಾಗೀದಾರರಾಗಿದ್ದು, ತಮ್ಮ ಪಾಲಿನ ಅಗತ್ಯ ಕೊಡುಗೆ ನೀಡಬೇಕಿದೆ ಎಂದರು.


ರೈಲು ಮಾರ್ಗದಲ್ಲಿ ವನ್ಯಮೃಗ ಸಂಘರ್ಷ ತಪ್ಪಿಸಲು ಕೇಳ ಸೇತುವೆ, ಮೇಲ್ಸೇತುವೆ ನಿರ್ಮಾಣದ ಜತೆಗೆ ಆಪ್ಟಿಕಲ್ ಫೈಬರ್ ಕೇಬಲ್ ಹಾಗೂ ಎಐ ಕ್ಯಾಮರಾ ಆಧಾರಿತ ಎರಡು ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ತಿಳಿಸಿದರು. ರೈಲು ಅಪಘಾತ ತಪ್ಪಿಸುವ ಕವಚ್ ತಂತ್ರಜ್ಞಾನ, ಅತ್ಯಾಧುನಿಕ ಹಾಗೂ ಸಂಕೀರ್ಣವಾಗಿದ್ದು, 2016ರಲ್ಲಿ ಯೋಜನೆ ಆರಂಭಿಸಲಾಯಿತು. 2024ರ ಜುಲೈ ನಲ್ಲಿ ಅಂತಿಮ ವಿನ್ಯಾಸ ರೂಪುಗೊಂಡಿದ್ದು, ಇದು ಜಾಗತಿಕ ಶ್ಲಾಘನೆಗೆ ಪಾತ್ರವಾಗಿದೆ.

ಕವಚ್ ತಂತ್ರಜ್ಞಾನದಲ್ಲಿ 5 ಭಾಗಗಳಿದ್ದು, ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಆರಂಭಿಕ ಹಂತವಾಗಿದ್ದು, ಈಗಾಗಲೆ 8 ಸಾವಿರದ 570 ಕಿಲೋ ಮೀಟರ್ ಮಾರ್ಗಗಳಲ್ಲಿ ಇದನ್ನು ಅಳವಡಿಸಲಾಗಿದೆ. ಇದಲ್ಲದೆ 1 ಸಾವಿರದ 100 ಕಿಲೋ ಮೀಟರ್ ಗೂ ಹೆಚ್ಚು ಮಾರ್ಗದಲ್ಲಿ ದೂರಸಂಪರ್ಕ ಗೋಪುರ ಅಳವಡಿಸಲಾಗಿದ್ದು, 767 ರೈಲು ನಿಲ್ದಾಣಗಳಲ್ಲಿ ದತ್ತಾಂಶ ಕೇಂದ್ರ ಸ್ಥಾಪಿಸಲಾಗಿದೆ. 6 ಸಾವಿರದ 776 ಕಿಲೋ ಮೀಟರ್ ಮಾರ್ಗದಲ್ಲಿ ಹಳಿ ಪಕ್ಕದ ಸಾಧನ – ಸಲಕರಣೆ ಅಳವಡಿಸುವಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದರು.


ಅಂತರ್ಜಾಲ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದಡಿ, ಅಂತರ್ಜಾಲ ಸೌಲಭ್ಯ ವಿಸ್ತರಣೆ, ಕಡಿಮೆ ದರದಲ್ಲಿ ಅಂತರ್ಜಾಲ ಒದಗಿಸುವುದು ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

2014ರಲ್ಲಿ ದೇಶದಲ್ಲಿ ಕೇವಲ 25 ಕೋಟಿ ಅಂತರ್ಜಾಲ ಬಳಕೆದಾರರಿದ್ದು, ಪ್ರಸ್ತುತ 103 ಕೋಟಿಗೂ ಹೆಚ್ಚು ನಾಗರಿಕರು ಅಂತರ್ಜಾಲ ಬಳಸುತ್ತಿದ್ದಾರೆ. ಅಂತರ್ಜಾಲ ದರ ಜಗತ್ತಿನಲ್ಲೇ , ಭಾರತದಲ್ಲಿ ಅತಿ ಕಡಿಮೆ ಇದ್ದು, ಪ್ರತಿ ಒಂದು ಜಿಬಿ ಅಂತರ್ಜಾಲದ ಜಾಗತಿಕ ಸರಾಸರಿ ದರ 2.59 ಡಾಲರ್ ಇದ್ದರೆ, ಭಾರತದಲ್ಲಿ 0.08 ಡಾಲರ್ ಇದೆ ಎಂದರು. ಕೃತಕ ಬುದ್ದಿಮತ್ತೆ – ಎಐ ತಂತ್ರಜ್ಞಾನದಲ್ಲಿ, ಭಾರತ ಅಗ್ರ ಮೂರು ರಾಷ್ಟ್ರಗಳ ಪೈಕಿ ಒಂದಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಸರ್ವಂ’ ಸೂಪರ್ ಕಂಪ್ಯೂಟರ್ ಜಾಗತಿಕ ಅತ್ಯುತ್ತಮ ಮಾದರಿ ಎನಿಸಿದೆ ಎಂದು ವಿವರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !