ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪ್ರವಾಸದ ವೇಳೆ ಅಫ್ಘಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಕಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಈ ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಇಲ್ಲದೇ ಇರುವುದು ಬಹಳ ವಿವಾದಕ್ಕೆ ಕಾರಣವಾಗಿತ್ತು. ವಿಪಕ್ಷಗಳು ಸೇರಿದಂತೆ ಕೆಲವರು ಇದರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಸಚಿವ ಆಮೀರ್ ಖಾನ್ ಮುತ್ತಕಿ ಇಂದು ಮಹಿಳೆಯರಿಗಾಗಿಯೇ ವಿಶೇಷ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ. ಇದೇ ವೇಳೆ ನಿನ್ನೆ ನಡೆದಿರುವ ಘಟನೆಯ ಬಗ್ಗೆ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಪತ್ರಿಕಾಗೋಷ್ಠಿಗೆ ಯಾವುದೇ ಮಹಿಳಾ ಪತ್ರಕರ್ತರನ್ನು ಉದ್ದೇಶಪೂರ್ವಕವಾಗಿ ನಾವು ತಡೆಯಲಿಲ್ಲ. ಅಷ್ಟೇ ಅಲ್ಲದೇ ಈ ಪತ್ರಿಕಾಗೋಷ್ಠಿ ನಾವು ಕರೆದಿರುವುದರಿಂದ ಇದರಲ್ಲಿ ಭಾರತದ ಪಾತ್ರವಿಲ್ಲ ಎಂದಿದ್ದಾರೆ.
ಪತ್ರಕರ್ತೆಯರು ಇಲ್ಲಿಗೆ ಬರದೇ ಇರುವುದು ತಾಂತ್ರಿಕ ಸಮಸ್ಯೆಯೇ ಹೊರತು ಉದ್ದೇಶಪೂರ್ವಕವಲ್ಲ. ಪತ್ರಿಕಾಗೋಷ್ಠಿಗೆ ಸಂಬಂಧಿಸಿದಂತೆ ಇದು ಅಲ್ಪಾವಧಿಯ ಸೂಚನೆಯಾಗಿತ್ತು. ಇನ್ನು ಪತ್ರಕರ್ತರ ಸಣ್ಣ ಪಟ್ಟಿಯನ್ನು ನಿರ್ಧರಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರಿಗೆ ಆಹ್ವಾನ ನೀಡಲು ಸಾಧ್ಯವಾಗಿರಲಿಲ್ಲ ಎಂದು ಮುತ್ತಕಿ ಸ್ಪಷ್ಟಪಡಿಸಿದ್ದಾರೆ.
ನಮಗೆ ಸಮಯ ಬಹಳ ಕಡಿಮೆಯಿತ್ತು. ಆದ್ದರಿಂದ ನಾವು ಕೆಲವು ಪತ್ರಕರ್ತರನ್ನು ಮಾತ್ರ ಆಹ್ವಾನಿಸಿದ್ದೇವೆ. ನಾವು ಯಾರ ಹಕ್ಕುಗಳನ್ನೂ ನಿರಾಕರಿಸುತ್ತಿಲ್ಲ. ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತೇವೆ ಎಂದಿದ್ದಾರೆ.
ಮಹಿಳೆಯರನ್ನು ಹೊರಕ್ಕೆ ಇಟ್ಟಿರುವ ಕುರಿತು ಟೀಕೆ ಎದುರಿಸುತ್ತಿರುವ ಭಾರತ ಸರ್ಕಾರವು ಹಿಂದಿನ ಪತ್ರಿಕಾಗೋಷ್ಠಿಯನ್ನು ಆಯೋಜಿಸುವಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. ‘ನಿನ್ನೆ ದೆಹಲಿಯಲ್ಲಿ ಅಫ್ಘಾನ್ ವಿದೇಶಾಂಗ ಸಚಿವರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಯಾವುದೇ ಪಾತ್ರವನ್ನು ವಹಿಸಿಲ್ಲ’ ಎಂದು ಹೇಳಿದೆ. ಹಲವಾರು ವಿರೋಧ ಪಕ್ಷದ ನಾಯಕರು ಸರ್ಕಾರವು ಭಾರತೀಯ ನೆಲದಲ್ಲಿ ತಾರತಮ್ಯದ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡಿದೆ ಎಂದು ಆರೋಪಿಸಿದ ನಂತರ ಈ ಸ್ಪಷ್ಟೀಕರಣ ಬಂದಿದೆ.
2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಹಿರಿಯ ತಾಲಿಬಾನ್ ನಾಯಕ ಮುತ್ತಕಿ ಗುರುವಾರ ದೆಹಲಿಗೆ ಆಗಮಿಸಿದ್ದಾರೆ. ದ್ವಿಪಕ್ಷೀಯ ವ್ಯಾಪಾರ, ಮಾನವೀಯ ನೆರವು ಮತ್ತು ಭದ್ರತಾ ಸಹಕಾರದ ಬಗ್ಗೆ ಚರ್ಚಿಸಲು ಅವರು ಶುಕ್ರವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾದರು.