ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಈಗ ಕಾವು ಪಡೆದುಕೊಂಡಿದೆ. ಮೊದಲನೇ ಪಂದ್ಯದಲ್ಲಂತೂ ಭಾರತ ತಂಡ 7 ವಿಕೆಟ್‌ಗಳಿಂದ ಅಫ್ಘಾನಿಸ್ತಾನವನ್ನು ಏಕಪಕ್ಷೀಯವಾಗಿ ಬಗ್ಗುಬಡಿದು ಆರಾಮಾಗಿ ಗೆದ್ದುಬಂದಿದ್ದರು. ಈಗ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯನ್ನು ವಶ ಪಡಿಸಿಕೊಳೋಕ್ಕೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬಳಗ ಪಕ್ಕಾ ಪ್ಲಾನ್ ಮಾಡಿಕೊಂಡು ಮೈದಾನಕ್ಕಿಳಿದಿದೆ. ಇನ್ನೊಂದೆಡೆ, ‘ಹೇಗಾದರೂ ಮಾಡಿ ಸರಣಿಯನ್ನು ಜೀವಂತವಾಗಿಡಬೇಕು’ ಅನ್ನೋ ದೊಡ್ಡ ಇರಾದೆಯೊಂದಿಗೆ ಅಫ್ಘಾನಿಸ್ತಾನ ಮೈದಾನದಲ್ಲಿ ತೊಡೆ ತಟ್ಟಿದೆ.
ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ಯಾವುದೇ ಅನುಮಾನವಿಲ್ಲದೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಅಂದರೆ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿ ಭಾರತಕ್ಕೆ ಸವಾಲಿನ ಟಾರ್ಗೆಟ್ ನೀಡಬೇಕಾಗಿದೆ.
ಟಾಸ್ ಜೊತೆಗೆ ಎರಡೂ ತಂಡಗಳ ಆಡುವ 11ರ ಬಳಗವೂ ಹೊರಬಿದ್ದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಣ್ಣ ನಿರಾಶೆಯಾಗಿದೆ. ವೈಭವ್ ಸೂರ್ಯವಂಶಿಗೆ ಈ ಪಂದ್ಯದಲ್ಲೂ ಅವಕಾಶ ಸಿಕ್ಕಿಲ್ಲ. ಇದರರ್ಥ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಆದರೆ ತಂಡದಲ್ಲಿ ಒಂದು ಪ್ರಮುಖ ಬದಲಾವಣೆಯಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಇಡೀ ಸರಣಿಯಿಂದಲೇ ಹೊರಬಿದ್ದಿದ್ದು, ಅವರ ಜಾಗಕ್ಕೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಜಾಗ ಸಿಕ್ಕಿದೆ. ಇದನ್ನು ಬಿಟ್ಟರೆ ಭಾರತ ತಂಡದಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ಇತ್ತ ಅಫ್ಘಾನಿಸ್ತಾನ ಮಾತ್ರ ಮೊದಲ ಪಂದ್ಯದಲ್ಲಿ ಆಡಿದ್ದ ಅದೇ ತಂಡ ಕಣಕ್ಕಿಳಿದಿದೆ.



