Friday, January 2, 2026

ಟಿ20 ವಿಶ್ವಕಪ್ ಟೂರ್ನಿಗೆ ಆಫ್ರಿಕಾ ತಂಡ ಪ್ರಕಟ: ಮಾರ್ಕ್‌ರಮ್‌ಗೆ ಹೆಗಲಿಗೆ ನಾಯಕ ಪಟ್ಟ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ 15 ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು, ಏಯ್ಡನ್ ಮಾರ್ಕ್‌ರಮ್‌ಗೆ ನಾಯಕ ಪಟ್ಟ ಕಟ್ಟಲಾಗಿದೆ.

ಇತ್ತೀಚೆಗಷ್ಟೇ ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿರುವ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಏನ್ರಿಚ್ ನೋಕಿಯ ಕೂಡಾ ಹರಿಣಗಳ ಪಡೆಗೆ ಕಮ್‌ಬ್ಯಾಕ್ ಮಾಡಿದ್ದಾರೆ.

ತಂಡದಲ್ಲಿ ನಾಯಕ ಏಯ್ಡನ್ ಮಾರ್ಕ್‌ರಮ್ ಮಾತ್ರವಲ್ಲದೇ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೋರ್ಜಿ, ಡೆವಾಲ್ಡ್ ಬ್ರೆವೀಸ್, ಜಾನ್ಸನ್ ಸ್ಮಿತ್, ಡೇವಿಡ್ ಮಿಲ್ಲರ್ ಹಾಗೂ ಡೊನೊವನ್ ಪೆರೆರಾ ಅವರನ್ನೊಳಗೊಂಡ ಬಲಿಷ್ಠ ಬ್ಯಾಟಿಂಗ್ ವಿಭಾಗ ಎದುರಾಳಿ ಪಡೆಯನ್ನು ಕಾಡಲು ಸಜ್ಜಾಗಿದೆ. ಇನ್ನು ಕಗಿಸೋ ರಬಾಡ, ಖ್ವೆನಾ ಮಫಾಕಾ, ಏನ್ರಿಚ್ ನೋಕಿಯ, ಲುಂಗಿ ಎಂಗಿಡಿ ಹಾಗೂ ಕಾರ್ಬಿನ್ ಬಾಶ್ ಅವರನ್ನೊಳಗೊಂಡ ವೇಗದ ಬೌಲಿಂಗ್ ಪಡೆ ಕೂಡಾ ಸದೃಢವಾಗಿದೆ. ಇನ್ನು ಸ್ಪಿನ್ ವಿಭಾಗವನ್ನು ಕೇಶವ್ ಮಹರಾಜ್ ಮುನ್ನಡೆಸಲಿದ್ದಾರೆ. ಇವರಿಗೆ ಜಾರ್ಜ್‌ ಲಿಂಡೆ, ಏಯ್ಡನ್ ಮಾರ್ಕ್‌ರಮ್, ಡೊನೊವನ್ ಪೆರೆರಾ ಸಾಥ್ ನೀಡಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡವು ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಆಫ್ಘಾನಿಸ್ತಾನ, ನ್ಯೂಜಿಲೆಂಡ್, ಕೆನಡಾ ಹಾಗೂ ಯುಎಇ ತಂಡಗಳು ಸ್ಥಾನ ಪಡೆದಿವೆ.

ಕಳೆದ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಭಾರತ ಎದುರು ರೋಚಕ ಸೋಲು ಅನುಭವಿಸಿತ್ತು.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ:
ಏಯ್ಡನ್ ಮಾರ್ಕ್‌ರಮ್(ನಾಯಕ), ಡೇವಿಡ್ ಮಿಲ್ಲರ್, ಡೆವಾಲ್ಡ್ ಬ್ರೆವೀಸ್, ಟೋನಿ ಡಿ ಜೋರ್ಜಿ, ಜೇಸನ್ ಸ್ಮಿತ್, ಕ್ವಿಂಟನ್ ಡಿ ಕಾಕ್, ಕಾರ್ಬಿನ್ ಬಾಶ್, ಡೆನೊವನ್ ಪೆರೆರಿಯಾ, ಮಾರ್ಕೊ ಯಾನ್ಸನ್, ಜಾರ್ಜ್ ಲಿಂಡೆ, ಕಗಿಸೋ ರಬಾಡ, ಲುಂಗಿ ಎಂಗಿಡಿ, ಏನ್ರಿಚ್ ನೋಕಿಯ, ಖ್ವೆನಾ ಮಫಾಕ.

error: Content is protected !!