ಹೊಸದಿಗಂತ ಡಿಜಿಟಲ್ ಡೆಸ್ಕ್:
17 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿ ಆಡಲು ಬಂದ ಆಂಗ್ಲರಿಗೆ ಸತತ ಎರಡು ಪಂದ್ಯಗಳಲ್ಲಿ ಗೆಲುವಿನ ಶುಭಾರಂಭ ಸಿಕ್ಕಿದೆ.
ಇಲ್ಲಿನ ರಾವಲ್ಪಿಂಡಿಯಲ್ಲಿ ಸ್ಟೋಕ್ಸ್ ಪಡೆ ಎರಡನೇ ಟೆಸ್ಟ್ ಪಂದ್ಯವನ್ನು 26 ರನ್ಗಳಿಂದ ಗೆದ್ದುಬೀಗಿದೆ. ಇದರೊಂದಿಗೆ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದೆ.
ಪಾಕಿಸ್ತಾನಕ್ಕೆ 355 ರನ್ಗಳ ಗೆಲುವಿನ ಗುರಿ ನೀಡಿದ್ದ ಇಂಗ್ಲೆಂಡ್, ಬಾಬರ್ (Babar Azam) ಪಡೆಯನ್ನು 328 ರನ್‌ಗಳಲ್ಲಿ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 281 ರನ್ಗಳಿಸಲಷ್ಟೇ ಶಕ್ತವಾಯಿತು.ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಬಾಬರ್ ಅಜಮ್ ಹಾಗೂ ಸೌದ್ ಶಕೀಲ್ ಅವರ ಅರ್ಧಶತಕದ ಹೊರತಾಗಿಯೂ ಕೇವಲ 202 ರನ್ಗಳಿಗೆ ಆಲೌಟ್ ಆಯಿತು.
79 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 275 ರನ್ ಗಳಿಸಿ ಆಲ್ಔಟ್ ಆಯಿತು. ಇದರೊಂದಿಗೆ ಪಾಕಿಸ್ತಾನಕ್ಕೆ 355 ರನ್ಗಳ ಟಾರ್ಗೆಟ್ ನೀಡುವಲ್ಲಿ ಆಂಗ್ಲರು ಯಶಸ್ವಿಯಾದರು.ಇಂಗ್ಲೆಂಡ್ ನೀಡಿದ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಉತ್ತಮ ಆರಂಭವೇ ಸಿಕ್ಕಿತು. ಆದರೆ ಬಳಿಕ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನತ್ತ ಮುಖಮಾಡಿದರು. ಅಂತಿಮವಾಗಿ ಪಾಕಿಸ್ತಾನ ತಂಡ 328 ರನ್ಗಳಿಗೆ ಆಲೌಟ್ ಆಗಿ, 26 ರನ್ಗಳ ಸೋಲು ಅನುಭವಿಸಿತು.