Monday, December 15, 2025

ನೋವು, ಕಣ್ಣೀರು, ಮಾನಸಿಕ ಹೋರಾಟದ ನಂತರ ಕಟುವಾದ ಸತ್ಯದ ಅರಿವು: ನಟಿ ಭಾವನಾ ಬೇಸರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟಿ ಭಾವನಾ ಮೆನನ್ ಅವರು ತಮ್ಮ ದೀರ್ಘಕಾಲದ ಕಾನೂನು ಹೋರಾಟದ ಕುರಿತು ಮೌನ ಮುರಿದಿದ್ದಾರೆ. ಇತ್ತೀಚಿನ ಕೋರ್ಟ್ ಬೆಳವಣಿಗೆಗಳ ನಂತರ ತೀವ್ರ ಬೇಸರಗೊಂಡಿರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ನೋವಿನ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ವ್ಯವಸ್ಥೆಯ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಭಾವನಾ, “ಕಳೆದ ಹಲವು ವರ್ಷಗಳಿಂದ ನಾನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೆ. ನನಗೆ ಈ ನಿರ್ದಿಷ್ಟ ನ್ಯಾಯಾಲಯದ ಮೇಲೆ ನಂಬಿಕೆಯಿಲ್ಲ ಎಂದು ಪದೇ ಪದೇ ಸ್ಪಷ್ಟವಾಗಿ ಹೇಳಿದ್ದೆ. ಅದೇ ನ್ಯಾಯಾಧೀಶರಿಂದ ಈ ಪ್ರಕರಣವನ್ನು ಬೇರೆಡೆಗೆ ವರ್ಗಾಯಿಸುವಂತೆ ನಾನು ಮಾಡಿದ ಪ್ರತಿಯೊಂದು ಮನವಿಯನ್ನು ತಿರಸ್ಕರಿಸಲಾಯಿತು,” ಎಂದು ವಿವರಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ನೋವು, ಕಣ್ಣೀರು ಮತ್ತು ಮಾನಸಿಕ ಹೋರಾಟದ ನಂತರ, ನನಗೊಂದು ಕಟುವಾದ ಸತ್ಯದ ಅರಿವಾಗಿದೆ. ‘ಈ ದೇಶದ ಪ್ರತಿಯೊಬ್ಬ ಪ್ರಜೆಯನ್ನು ಕಾನೂನಿನ ಮುಂದೆ ಸಮಾನವಾಗಿ ನಡೆಸಿಕೊಳ್ಳಲಾಗುವುದಿಲ್ಲ’ ಎಂಬುದು ನನಗೆ ಅರ್ಥವಾಗಿದೆ, ಎಂದು ಬರೆಯುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಈ ತೀರ್ಪು, ಮಾನವನ ಆಲೋಚನೆಗಳು ಅಥವಾ ಪೂರ್ವಾಗ್ರಹಗಳು ನ್ಯಾಯಾಂಗದ ನಿರ್ಧಾರಗಳನ್ನು ಎಷ್ಟು ಬಲವಾಗಿ ರೂಪಿಸಬಲ್ಲವು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಭಾವನಾ ಅಭಿಪ್ರಾಯಪಟ್ಟಿದ್ದಾರೆ. ಆದರೂ, ಪ್ರತಿಯೊಂದು ನ್ಯಾಯಾಲಯವೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂಬುದು ನನಗೊತ್ತಿದೆ ಎಂದು ಹೇಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯ ಮೇಲಿನ ತಮ್ಮ ಅಳಿದುಳಿದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಇದೇ ವೇಳೆ, ಈ ಕಠಿಣ ಸಮಯದಲ್ಲಿ ತಮ್ಮ ಬೆಂಬಲಕ್ಕೆ ನಿಂತವರಿಗೆ ಭಾವನಾ ಧನ್ಯವಾದ ತಿಳಿಸಿದ್ದಾರೆ.

ನನ್ನ ಮೇಲೆ ನಿರಂತರವಾಗಿ ಕೆಟ್ಟ ಕಾಮೆಂಟ್‌ಗಳ ಮೂಲಕ ದಾಳಿ ಮಾಡುತ್ತಿರುವವರು ಮತ್ತು ಹಣ ಪಡೆದು ‘ಕಟ್ಟುಕಥೆ’ಗಳನ್ನು ಹಬ್ಬಿಸುತ್ತಿರುವವರಿಗೆ ನಾನೊಂದು ಮಾತು ಹೇಳುತ್ತೇನೆ; ನಿಮಗೆ ಹಣ ಸಿಗುತ್ತಿದೆ ಎಂಬ ಕಾರಣಕ್ಕೆ ನೀವು ಮಾಡುತ್ತಿರುವ ಕೆಲಸವನ್ನು ಮುಂದುವರಿಸಬಹುದು, ನಿಮಗೆ ಅದಕ್ಕೆ ಸ್ವಾತಂತ್ರ್ಯವಿದೆ, ಎಂದು ನಟಿ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

error: Content is protected !!