ಮತ್ತೆ ಮೋದಿಯೇ ನಮ್ಮ ಪ್ರಧಾನಿ: ಉರಿ ಬಿಸಿಲು, ಚಳಿ ಲೆಕ್ಕಿಸದೆ ಸೈಕಲ್‌ನಲ್ಲಿ ದೆಹಲಿಗೆ ಹೊರಟ ಸಹೋದರರು!

  • ರಾಚಪ್ಪ ಜಂಬಗಿ

ಕಲಬುರಗಿ: ಮುಂಬರುವ ದಿನಗಳಲ್ಲಿ ದೇಶದಲ್ಲಿ ನಡೆಯಲಿರುವ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಅಭೂತಪೂರ್ವ ಜಯ ಸಾಧಿಸುವ ಮೂಲಕ ಮೂರನೇ ಅವಧಿಯಲ್ಲಿಯೂ ಸಹ ಈ ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿ, ಮೋದಿ ಅಭಿಮಾನಿ ಸಹೋದರರು ಕಳೆದ ಒಂದು ವರ್ಷದಿಂದ ತಮ್ಮ ಕೊರಳಿನಲ್ಲಿ ಮೋದಿ ಭಾವಚಿತ್ರದ ಫೊಟೊ ಹಾಕಿಕೊಂಡು ಸುತ್ತಾಟ ನಡೆಸಿದ್ದಾರೆ.

ಕಲಬುರಗಿ ನಗರದ ಹೊರವಲಯದ ಚೆಕ್ ಪೋಸ್ಟ್ ಬಳಿಯ ರಾಮತೀರ್ಥ ಬಡಾವಣಣೆಯ ನಿವಾಸಿಗಳಾದ ರಾಜಶೇಖರ ಜಮಾದಾರ ಹಾಗೂ ರಾಮತೀರ್ಥ ಜಮಾದಾರ್ ಎಂಬ ಸಹೋದರರು ಕೊರಳಿನಲ್ಲಿ ಮೋದಿ ಭಾವಚಿತ್ರದ ಪೋಟೋ ಹಾಕಿಕೊಂಡು ನರೇಂದ್ರ ಮೋದಿ ಅವರ ಎರಡು ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆ ಜನರಿಗೆ ತಿಳಿಸುವ ಮೂಲಕ ಮೋದಿ ಪರವಾಗಿರುವ ವಿಶೇಷ ಅಭಿಮಾನ ತೋರಿದ್ದಾರೆ.

ಸಹೋದರರಿಂದ ಸೈಕಲ್ ಜಾಥಾ:

ಸಹೋದರರು ಮೋದಿ ಅಭಿಮಾನದ ಜೊತೆ ಜೊತೆಗೆ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂದು ಹಲವು ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ, ಇಲ್ಲಿಯವರೆಗೂ ಸಮುದಾಯದ ಬೇಡಿಕೆ ಇಡೇರದಿರುವ ಕಾರಣಕ್ಕಾಗಿ ಸಹೋದರರು ಕಲಬುರಗಿಯಿಂದ ನವ ದೆಹಲಿವರೆಗೆ ಸೈಕಲ್ ಜಾಥಾ ನಡೆಸಿ, ಸಮುದಾಯಕ್ಕೆ ನ್ಯಾಯ ಕೊಡಿಸುವ ಹಾದಿಯಲ್ಲಿ ನಡೆಯುತ್ತಿದ್ದಾರೆ. ಸರಿ ಸುಮಾರು 45 ದಿನಗಳ ಕಾಲ 2 ಸಾವಿರ ಕಿಲೋಮೀಟರ್ ಸಮೀಪ ಸೈಕಲ್ ಜಾಥಾ ನಡೆಸಿ, ದೆಹಲಿಯಲ್ಲಿ ಸಂಬಂಧ ಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

7 ರಾಜ್ಯಗಳಲ್ಲಿ ಮೋದಿ ಜನಪರ ಯೋಜನೆಗಳ ಜಾಗೃತಿ

ಕಲಬುರಗಿಯಿಂದ ನವ ದೆಹಲಿವರೆಗೆ ಸೈಕಲ್ ಜಾಥಾ ನಡೆಸಿದ ಸಹೋದರರಿಬ್ಬರು ಸುಮಾರು ಏಳು ರಾಜ್ಯಗಳಿಗೆ ಹಾದು, ದೆಹಲಿ ತಲುಪಿದ್ದಾರೆ. ಮಾರ್ಗ ಮಧ್ಯದಲ್ಲಿ ಸಿಗುವ ರಾಜ್ಯಗಳಲ್ಲಿ ನರೇಂದ್ರ ಮೋದಿ ಅವರ ಎರಡು ಬಾರಿಯ ಆಡಳಿತದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳಾದ ಜನ ಧನ್ ಖಾತೆ, ಆಯುಷ್ಮಾನ್ ಭಾರತ ಯೋಜನೆ,ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ, ಉಜ್ವಲಾ ಯೋಜನೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಪ್ರಚಾರ ಮಾಡುತ್ತ, ಅವುಗಳ ಸದುಪಯೋಗ ಕುರಿತು ಜನರಿಗೆ ತಿಳಿಸುವಂತಹ ಕೆಲಸ ಮಾಡಿದ್ದಾರೆ.

ಕಲಬುರಗಿಯ ಸಹೋದರರಿಬ್ಬರು ಒಟ್ಟಾರೆಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೆ ಬಾರಿ ಅಧಿಕಾರಕ್ಕೆ ಬರುವ ಮೂಲಕ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಬೇಕು ಹಾಗೂ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂಬುವುದೇ ಇಬ್ಬರ ಆಶಯವಾಗಿದೆ. ಇಂದಿಗೂ ಸಹ ಇದೇ ಆಶಯದೊಂದಿಗೆ ಕೊರಳಿನಲ್ಲಿ ಮೋದಿ ಪೋಟೋವನ್ನು ಹಾಕಿಕೊಂಡು ಸುತ್ತಾಟ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!