ಮೈಸೂರಿನಲ್ಲಿ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಗೆ ಚಾಲನೆ: 14 ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಗ್ನಿವೀರ್ ಯೋಜನೆಯಡಿ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ ಆರಂಭವಾಗಿದ್ದು, ನಾಲ್ಕು ದಿನಗಳ ಕಾಲ ಈ ನೇಮಕಾತಿ ರ‍್ಯಾಲಿ ನಡೆಯಲಿದೆ.

ಸೇನಾ ನೇಮಕಾತಿ ರ‍್ಯಾಲಿಯ ಮೊದಲನೇ ದಿನವಾದ ಬುಧವಾರ 559 ಮಂದಿಗೆ ದೈಹಿಕ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಆಯ್ಕೆಯಾದ 492 ಮಂದಿ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಮೈಸೂರಿನಲ್ಲಿ ನಡೆಯುತ್ತಿರುವ ಈ ರ‍್ಯಾಲಿಯಲ್ಲಿ 14 ಜಿಲ್ಲೆಗಳ ಅಭ್ಯರ್ಥಿಗಳು  ಭಾಗವಹಿಸಿದ್ದು , ಭಾಗವಹಿಸಿರುವ ಅಭ್ಯರ್ಥಿಗಳು ಈಗಾಗಲೇ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರನ್ನು ಅಗ್ನಿವೀರ್ ರ‍್ಯಾಲಿಯಲ್ಲಿ ಮೊದಲ ದಿನ ಕ್ರೀಡಾ ಚಟುವಟಿಕೆ ಹಾಗೂ ಎರಡನೇ ದಿನ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನು ರ‍್ಯಾಲಿಗೆ 14 ಜಿಲ್ಲೆಗಳ 1723 ಸೇನಾ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಗ್ನಿವೀರ್ ನೇಮಕಾತಿ ಅಧಿಕಾರಿ ಗೌರವ್ ತಾಪ ಮಾಹಿತಿ ನೀಡಿದರು.

ಡಿಸಿ ಭೇಟಿ: ಪರಿಶೀಲನೆ
ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಸ್ಥಳಕ್ಕೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ ವಿ. ರಾಜೇಂದ್ರ ಭೇಟಿ ನೀಡಿ ಆಯ್ಕೆ ಪ್ರಕ್ರಿಯೆ ಹಾಗೂ ಅಗತ್ಯ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ, ಸೇನಾಧಿಕಾರಿಗಳಿಂದ ಮಾಹಿತಿ ಪಡೆದರು.

ಅಭ್ಯರ್ಥಿಗಳ ವಾಸ್ತವ್ಯಕ್ಕೆ ವ್ಯವಸ್ಥೆ
ನಾಲ್ಕು ದಿನಗಳ ಕಾಲ ನಡೆಯುವ ಅಗ್ನಿವೀರ್ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಗರದ ನಂಜ ಬಹದ್ದೂರ್ ಛತ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡು ಹಾಗೂ ಚಾಮುಂಡೇಶ್ವರಿ ದೇವಾಲಯದಲ್ಲಿ ಅನ್ನ ದಾಸೋಹ ಮಾಡುವ ಬಾಣಸಿಗರನ್ನು ಅಭ್ಯರ್ಥಿಗಳಿಗೆ ಅಡುಗೆ ಮಾಡಲು ನೇಮಿಸಲಾಗಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಹಾಗೂ ಎನ್​ಸಿಸಿ ವತಿಯಿಂದ ಅಭ್ಯರ್ಥಿಗಳನ್ನು ವಾಸ್ತವ್ಯ ಸ್ಥಳದಿಂದ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!