ಹೊಸದಿಗಂತ ವರದಿ, ಬೆಂಗಳೂರು:
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ವಾಗತಿಸಿದ್ದಾರೆ.
ಕೃಷಿ ವಲಯ ಮತ್ತು ಕೃಷಿಧಾನ್ಯಗಳ ಬೆಳೆಗೆ ಉತ್ತೇಜನ, ಉದ್ಯೋಗ ಸೃಷ್ಟಿ, ಯುವ ಉದ್ಯಮಿಗಳಿಗೆ ಪ್ರೋತ್ಸಾಹ, ಉತ್ಪಾದನೆಗೆ ಒತ್ತು ಇತ್ಯಾದಿ ಕಮಗಳು ಸ್ವಾಗತಾರ್ಹ ಎಂದಿರುವ ಅವರು, ದೇಶೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಕಲ್ಪ ಮಾಡಿ ಲಕ್ಷದ್ವೀಪ ಸೇರಿ ರಾಜ್ಯದ ಕರಾವಳಿ ಪ್ರವಾಸೋದ್ಯಮದ ಬೆಳವಣಿಗೆಗೆ ಮನ್ನಣೆ ಹಾಕಲಾಗಿದೆ ಎಂದಿದ್ದಾರೆ.
ಇದೊಂದು ಜನಪರ, ಅಭಿವೃದ್ಧಿಪರ ಹಾಗೂ ವಿಕಾಸಪೂರಕ ಬಜೆಟ್. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಈ ಆಯವ್ಯಯದಲ್ಲಿ ಅಡಗಿದೆ. ಹಿಂದಿನ ಐದು ವರ್ಷದ ಆಡಳಿತದಲ್ಲಿ ಯಾವ ಯಾವ ವಲಯಕ್ಕೆ ಶಕ್ತಿ ತುಂಬಿದ್ದೇವೆ ಅನ್ನುವ ಮಾಹಿತಿಯನ್ನು ಹಣಕಾಸು ಸಚಿವರು ನೀಡಿದ್ದಾರೆ. ಯುವಜನತೆ ಸೇರಿ ಹಲವು ವರ್ಗಕ್ಕೆ ಹೆಚ್ಚಿನ ಆರ್ಥಿಕ ಶಕ್ತಿ ನೀಡುವ ಭರವಸೆ ನೀಡಿದ್ದಾರೆ. ಉತ್ಪಾದನಾ ಕ್ಷೇತ್ರದ ಓಟಕ್ಕೆ ಇಂಬು ಕೊಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮಧ್ಯಂತರ ಬಜೆಟ್ ನಲ್ಲಿ ಪ್ರವಾಸೋದ್ಯಮ, ಮೀನುಗಾರಿಕೆಗೆ ಆದ್ಯತೆ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದಾರೆ ಎಂದಿದ್ದಾರೆ.
ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವೆ
ರಾಜ್ಯದ ಅಭಿವೃದ್ಧಿ ಬಗ್ಗೆ ಮುಂದಿನ ದಿನಗಳಲ್ಲಿ ಕೇಂದ್ರ ಬಿಜೆಪಿ ನಾಯಕರ ಜತೆ ಮುಕ್ತವಾಗಿ ಚರ್ಚೆ ಮಾಡುತ್ತೇನೆ. ಇದು ಮಧ್ಯಂತರ ಬಜೆಟ್. ಹಾಗಾಗಿ ಚುನಾವಣೆ ಬಳಿಕ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ. ನನಗೂ ರಾಜ್ಯದ ಸಮಸ್ಯೆಗಳ ಬಗ್ಗೆ ಅರಿವಿದೆ. ಎಲ್ಲಿ ಅನ್ಯಾಯವಾಗಿದೆ ಅದೆಲ್ಲವನ್ನೂ ಸರಿಮಾಡುವ ನಿಟ್ಟಿನಲ್ಲಿ ಕೇಂದ್ರದ ಮನವೊಲಿಸುತ್ತೇವೆ. ಪ್ರಾಮಾಣಿಕವಾಗಿ ರಾಜ್ಯದ ಜನತೆ ಪರವಾಗಿ ಧ್ವನಿ ಎತ್ತುತ್ತೇನೆ. ಅದರ ಜತೆಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾದಾಗ ಕರ್ನಾಟಕಕ್ಕೆ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ನೆರವು ಸಿಗುತ್ತದೆ ಎನ್ನುವ ನಿರೀಕ್ಷೆ ನನಗಿದೆ ಎಂದು ಅವರು ಹೇಳಿದ್ದಾರೆ.