ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ AI-171 ವಿಮಾನ ಗುರುವಾರ ಮಧ್ಯಾಹ್ನ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಭಾರೀ ದುರಂತಕ್ಕೆ ಕಾರಣವಾಯಿತು.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (DGCA) ಪ್ರಕಾರ, ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ‘ಮೇಡೇ’ ಎಂಬ ತುರ್ತು ಸಂದೇಶವನ್ನೇ ಎಟಿಸಿ ಕೇಂದ್ರಕ್ಕೆ ಕಳಿಸಿತ್ತು. ಸಂದೇಶ ಕಳಿಸಿದ ತಕ್ಷಣ ವಿಮಾನ ನಿಯಂತ್ರಣವನ್ನು ಕಳೆದುಕೊಂಡು, ಮೇಘಾನಿನಗರದ ವಸತಿ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳಿಗೆ ಡಿಕ್ಕಿಹೊಡೆದು ಭಸ್ಮವಾಗಿದೆ.
ಅಪಘಾತದ ನಿಖರ ಕಾರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖಾ ತಂಡಗಳು ಬ್ಲ್ಯಾಕ್ ಬಾಕ್ಸ್ ಶೋಧನೆಯಲ್ಲಿ ತೊಡಗಿದ್ದವು. 28 ಗಂಟೆಗಳ ಕಾರ್ಯಾಚರಣೆ ಬಳಿಕ ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆಹಚ್ಚಿ, ಅದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತಂಡಕ್ಕೆ ಹಸ್ತಾಂತರಿಸಲಾಗಿದೆ. ಬ್ಲ್ಯಾಕ್ ಬಾಕ್ಸ್‌ನಲ್ಲಿ ದಾಖಲಾಗಿರುವ ದತ್ತಾಂಶದಿಂದಾಗಿ ಕೊನೆಯ ಕ್ಷಣಗಳ ನಿಖರ ಚಿತ್ರಣ ಸ್ಪಷ್ಟವಾಗಲಿದೆ ಎಂಬ ನಿರೀಕ್ಷೆ ಇದೆ.
ವಿಮಾನ ಬ್ಲ್ಯಾಕ್ ಬಾಕ್ಸ್ ಎಂಬುದು ಎರಡು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ: ಹಾರಾಟದ ದತ್ತಾಂಶ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ಧ್ವನಿ ರೆಕಾರ್ಡರ್ (CVR). FDR ವಿಮಾನದ ವೇಗ, ಎತ್ತರ, ಎಂಜಿನ್ ಸ್ಥಿತಿ ಮುಂತಾದ ತಾಂತ್ರಿಕ ಅಂಶಗಳನ್ನು ಸಂಗ್ರಹಿಸುತ್ತದೆ.