ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಗುರಿ: ರಾಜ್ಯ ಪ್ರವಾಸಕ್ಕೆ ಬಿ.ಎಸ್‌. ಯಡಿಯೂರಪ್ಪ ಪ್ಲಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಂಕಲ್ಪ ಮಾಡಿರುವುದರಿಂದ ಪ್ರತಿ ಜಿಲ್ಲೆಯ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸುವ ಸಂಬಂಧ ಶೀಘ್ರದಲ್ಲೇ ರಾಜ್ಯ ಪ್ರವಾಸ ಆರಂಭಿಸುತ್ತೇನೆ ಎಂದು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಸರಿಸಾಟಿಯಾದ ವ್ಯಕ್ತಿ ಕಾಂಗ್ರೆಸ್‌ ಪಕ್ಷದಲ್ಲಿ ಯಾರೂ ಇಲ್ಲ. ಇದನ್ನು ಸದುಪಯೋಗಪಡಿಸಿಕೊಂಡು ರಾಜ್ಯದ 28 ಕ್ಷೇತ್ರಗಳಲ್ಲಿ ಗೆಲ್ಲಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಮೂರ್ನಾಲ್ಕು ದಿನಗಳಲ್ಲಿ ನಾನು ರಾಜ್ಯ ಪ್ರವಾಸ ಆರಂಭಿಸಲಿದ್ದೇನೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಪ್ರಮುಖ ಮುಖಂಡರ ಸಭೆ ನಡೆಸಿ ಚರ್ಚಿಸಲಿದ್ದೇನೆ. ಪ್ರಧಾನಿ ಮೋದಿ ಒಂದು ದಿನವೂ ರಜೆ-ವಿಶ್ರಾಂತಿ ಇಲ್ಲದೆ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಮುಖಂಡರಾದ ನಾವು ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ದಲಿತ ಸಮುದಾಯವನ್ನು ವೋಟ್‌ ಬ್ಯಾಂಕ್‌ ಆಗಿ ದುರುಪಯೋಗಪಡಿಸಿಕೊಂಡಿದೆ. ಈ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸವಾಗಿಲ್ಲ. ಪ್ರಧಾನಿ ಮೋದಿ ಅವರು ಎಲ್ಲ ಜಾತಿ-ವರ್ಗಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಧಾನಿಗಳ ನೇತೃತ್ವದಲ್ಲಿ ಕೆಲಸ ಮಾಡಲು ನಮಗೆ ಅವಕಾಶ ಸಿಕ್ಕಿದೆ. ಎಲ್ಲ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಇಡೀ ರಾಜ್ಯದಲ್ಲಿ ಸಂಚಲನ ಪ್ರಾರಂಭವಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!