ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಂದೂಗಳು ಒಬ್ಬ ಮಹಿಳೆಯನ್ನು ಮದುವೆಯಾಗುತ್ತಾರೆ, ಆದರೆ ಮೂವರು ಪ್ರೇಯಸಿಯರನ್ನು ಇರಿಸಿಕೊಂಡಿರುತ್ತಾರೆ ಎಂದು ಉತ್ತರ ಪ್ರದೇಶದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಶೌಕತ್ ಅಲಿ ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಯುಪಿಯ ಸಂಭಾಲ್ ಜಿಲ್ಲೆಯಲ್ಲಿ ಅವರು ಮಾಡಿದ ದ್ವೇಷದ ಭಾಷಣದ ವೀಡಿಯೊ ವೈರಲ್ ಆಗಿದ್ದು, ನಂತರ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಭಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಐಎಂಐಎಂ ನಾಯಕ, “ನಾವು ಮೂರು ಮದುವೆಗಳನ್ನಾಗುತ್ತೇವೆ ಎಂದು ಜನರು ಹೇಳುತ್ತಾರೆ. ನಾವು ಎರಡು ಮದುವೆ ಆದರೂ, ಸಮಾಜದಲ್ಲಿ ಇಬ್ಬರೂ ಹೆಂಡತಿಯರಿಗೆ ಗೌರವ ನೀಡುತ್ತೇವೆ. ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗುತ್ತೀರಿ ಮತ್ತು ಮೂವರು ಪ್ರೇಯಸಿಯರನ್ನು ಹೊಂದಿರುತ್ತೀರಿ. ನಿಮ್ಮ ಹೆಂಡತಿಯನ್ನಾಗಲೀ ಅಥವಾ ಪ್ರೇಯಸಿಯರನ್ನಾಗಲೀ ನೀವು ಗೌರವಿಸುವುದಿಲ್ಲ. ಆದರೆ ನಾವು ಮೂರು ಮದುವೆಯಾದರೂ, ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ಹೆಸರು ಕೂಡ ರೇಷನ್ ಕಾರ್ಡ್‌ನಲ್ಲಿ ಇರುತ್ತದೆ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಶೌಕತ್ ಅಲಿ, ಮುಸ್ಲಿಮರು 832 ವರ್ಷಗಳ ಕಾಲ ಈ ದೇಶವನ್ನು ಆಳಿದ್ದಾರೆ. ಈ ಅವಧಿಯಲ್ಲಿ ಹಿಂದೂಗಳು ಅವರ ಮುಂದೆ ತಲೆ ಬಾಗುತ್ತಿದ್ದರು. ಇದು ಇಷ್ಟಕ್ಕೆ ಸೀಮಿತವಲ್ಲ, ಮುಸ್ಲಿಂ ದೊರೆ ಅಕ್ಬರ್ ಹಿಂದೂ ತರುಣಿ ಜೋಧಾ ಬಾಯಿಯನ್ನು ಮದುವೆಯಾಗಿದ್ದರು ಎಂದು ಹೇಳಿದರು.
ಹಿಜಾಬ್ ಧರಿಸಬೇಕೆ, ಬೇಡವೆ ಎಂಬುದನ್ನು ಸಂವಿಧಾನವು ನಿರ್ಧರಿಸುತ್ತದೆ, ಹಿಂದುತ್ವವಲ್ಲ ಎಂದು ಕಿಡಿಕಾರಿದರು.
ಏತನ್ಮಧ್ಯೆ, ಎಐಎಂಐಎಂ ನಾಯಕನ ದ್ವೇಷದ ಭಾಷಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂಭಾಲ್ ಪೊಲೀಸರು ಶೌಕತ್ ಅಲಿ ಮತ್ತು ಇತರ ಮೂವರ ವಿರುದ್ಧ ಐಪಿಸಿ ಸೆಕ್ಷನ್ 188, 153 ಮತ್ತು 295 ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ