ಹೊಸದಿಗಂತ ಡಿಜಿಟಲ್ ಡೆಸ್ಕ್:
ಸತತ ಎರಡನೇ ದಿನವೂ ಏರ್ ಇಂಡಿಯಾದ ಹಲವು ವಿಮಾನಗಳ ಹಾರಾಟ ರದ್ದುಗೊಂಡಿದೆ. ಕಾರ್ಯಾಚರಣೆಯ ಕಾರಣಗಳು ಮತ್ತು ವಿಮಾನಗಳ ಮಾರ್ಗ ಬದಲಾವಣೆಯ ಪರಿಣಾಮದಿಂದಾಗಿ ಜೂನ್ 17 ರಂದು ನಿಗದಿಯಾಗಿದ್ದ ಮುಂಬೈ-ಲಕ್ನೋ ವಿಮಾನವನ್ನು ರದ್ದುಗೊಳಿಸಲಾಗಿದೆ.
ಇದಷ್ಟೇ ಅಲ್ಲದೇ ಇಂಡೋನೇಷ್ಯಾದ ಬಾಲಿ ವಿಮಾನ ನಿಲ್ದಾಣದ ಬಳಿ ಜ್ವಾಲಾಮುಖಿ ಸ್ಫೋಟಗೊಂಡ ಕಾರಣ ಏರ್ ಇಂಡಿಯಾ ಬುಧವಾರ ದೆಹಲಿ-ಬಾಲಿ ವಿಮಾನವನ್ನು ಮಧ್ಯದಲ್ಲೇ ದೆಹಲಿಗೆ ತಿರುಗಿಸಬೇಕಾಯಿತು ಎಂದು ವಿಮಾನಯಾನ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಂಬೈ-ಲಖನೌ ವಿಮಾನ ಕಾರ್ಯಾಚರಣೆ ರದ್ದತಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ಪ್ರಯಾಣಿಕರನ್ನು ಅವರ ಗಮ್ಯಸ್ಥಾನವಾದ ಲಕ್ನೋಗೆ ಆದಷ್ಟು ಬೇಗ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದೆ. ಜೂನ್ 17 ರಂದು ಮುಂಬೈನಿಂದ ಲಕ್ನೋಗೆ ನಿಗದಿಯಾಗಿದ್ದ ಏರ್ ಇಂಡಿಯಾ ವಿಮಾನ AI2491 ಅನ್ನು ಕಾರ್ಯಾಚರಣೆಯ ಕಾರಣಗಳಿಂದ ರದ್ದುಗೊಳಿಸಲಾಗಿದೆ.