ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಏರ್ ಇಂಡಿಯಾ ವಿಮಾನ ದುರಂತ ಸಂಭವಿಸಿ 9 ದಿನಗಳ ನಂತರ, ಡಿಎನ್‌ಎ ಹೊಂದಾಣಿಕೆಯ ಮೂಲಕ ಇದುವರೆಗೆ 147 ಜನರನ್ನು ಗುರುತಿಸಲಾಗಿದೆ ಮತ್ತು 232 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮೃತ ದೇಹಗಳನ್ನು ಗುರುತಿಸುವ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಜೂನ್ 21 ರಂದು ಸಂಜೆ 6 ಗಂಟೆಯ ಹೊತ್ತಿಗೆ, 247 ಮೃತ ವ್ಯಕ್ತಿಗಳ ಡಿಎನ್‌ಎ ಹೊಂದಾಣಿಕೆ ದೃಢಪಟ್ಟಿದೆ. ಈ ಪೈಕಿ 232 ಶವಗಳನ್ನು ಈಗಾಗಲೇ ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
23 ಶವಗಳನ್ನು ವಿಮಾನದ ಮೂಲಕ ಕಳುಹಿಸಲಾಗಿದೆ ಮತ್ತು 209 ಶವಗಳನ್ನು ಆಂಬ್ಯುಲೆನ್ಸ್ ಮೂಲಕ ಸ್ವಗ್ರಾಮಗಳಿಗೆ ಕರೆದೊಯ್ಯಲಾಗಿದೆ. ಶೀಘ್ರದಲ್ಲೇ ಉಳಿದ ಶವಗಳನ್ನು ಅವರ ಪ್ರೀತಿಪಾತ್ರರಿಗೆ ಹಸ್ತಾಂತರಿಸಲಾಗುವುದು. ಇನ್ನು 12 ಕುಟುಂಬಗಳು ನಂತರದ ಸಮಯದಲ್ಲಿ ಶವಗಳನ್ನು ಪಡೆಯಲು ಆಯ್ಕೆ ಮಾಡಿಕೊಂಡಿವೆ. ಹೆಚ್ಚುವರಿಯಾಗಿ ಮೂರು ಕುಟುಂಬಗಳು ಡಿಎನ್‌ಎ ವಿಶ್ಲೇಷಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.