ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಪರಿಸ್ಥಿತಿ ಗಂಭೀರ ಹಂತ ತಲುಪುತ್ತಿದೆ. ಬೆಂಗಳೂರು ಮಾತ್ರವಲ್ಲದೆ ಬಳ್ಳಾರಿ ಸೇರಿದಂತೆ ಹಲವೆಡೆ ಗಾಳಿಯ ಮಾಲಿನ್ಯ ಮಟ್ಟ ಆತಂಕಕಾರಿ ಮಟ್ಟಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕೆಲ ದಿನಗಳಲ್ಲಿ ಬಳ್ಳಾರಿಯ ಏರ್ ಕ್ವಾಲಿಟಿ ಇಂಡೆಕ್ಸ್ ಬೆಂಗಳೂರಿಗಿಂತ ಹೆಚ್ಚಾಗಿ ದಾಖಲಾಗಿದ್ದು, ತಜ್ಞರ ಗಮನ ಸೆಳೆದಿದೆ. ಕಳೆದ ಐದು ವರ್ಷಗಳಲ್ಲಿ ನಗರ ಪ್ರದೇಶಗಳ ವಾಯು ಗುಣಮಟ್ಟದಲ್ಲಿ ನಿರಂತರ ಕುಸಿತ ಕಂಡುಬಂದಿದ್ದು, particulate matter ಪ್ರಮಾಣ ಸುರಕ್ಷಿತ ಮಿತಿಯನ್ನು ದಾಟುತ್ತಿದೆ.
ಪ್ರಸ್ತುತ ಬೆಂಗಳೂರಿನ AQI ಸುಮಾರು 170ರ ಮಟ್ಟದಲ್ಲಿದ್ದು, ಇದು ‘ಅನಾರೋಗ್ಯಕರ’ ವರ್ಗಕ್ಕೆ ಸೇರಿದೆ. ದೆಹಲಿಯಷ್ಟು ತೀವ್ರವಾಗಿಲ್ಲವಾದರೂ, ಮಾಲಿನ್ಯ ಅಂತರ ವೇಗವಾಗಿ ಕಡಿಮೆಯಾಗುತ್ತಿರುವುದು ಚಿಂತಾಜನಕವಾಗಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ 20-25% ಹೆಚ್ಚಳ ಕಂಡಿದೆ. ಮುಂಬೈ ಹಾಗೂ ಕೋಲ್ಕತ್ತಾ ನಗರಗಳ ಮಟ್ಟಕ್ಕೆ ಬೆಂಗಳೂರು ಹತ್ತಿರವಾಗುತ್ತಿರುವುದನ್ನು ವರದಿಗಳು ಸೂಚಿಸುತ್ತವೆ. ಹತ್ತು ವರ್ಷಗಳ ಹಿಂದೆ ಈ ನಗರಗಳ ನಡುವೆ ಸ್ಪಷ್ಟ ವ್ಯತ್ಯಾಸ ಇದ್ದರೂ, ಈಗ ಪರಿಸ್ಥಿತಿ ಬದಲಾಗುತ್ತಿದೆ.
ನಗರದ ಗಾಳಿಯಲ್ಲಿ PM2.5 ಪ್ರಮಾಣ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಮಿತಿಗಿಂತ ನಾಲ್ಕು ಪಟ್ಟು ಹೆಚ್ಚು ದಾಖಲಾಗುತ್ತಿದೆ. ಹೆಚ್ಚುತ್ತಿರುವ ವಾಹನ ಸಂಚಾರ, ನಿರ್ಮಾಣ ಚಟುವಟಿಕೆಗಳು ಮತ್ತು ಕೈಗಾರಿಕಾ ಘಟಕಗಳು ಪ್ರಮುಖ ಕಾರಣಗಳಾಗಿವೆ. ಸಿಲ್ಕ್ ಬೋರ್ಡ್, ವೈಟ್‌ಫೀಲ್ಡ್ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಾಲಿನ್ಯ ಇನ್ನಷ್ಟು ಹೆಚ್ಚಾಗಿದೆ. ವಾಯು ಗುಣಮಟ್ಟ ಹದಗೆಟ್ಟರೆ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕೆಂದು ತಜ್ಞರು ಎಚ್ಚರಿಸಿದ್ದಾರೆ.

