ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನ ವಾಯುಪಡೆ ವೈಮಾನಿಕ ದಾಳಿ ನಡೆಸಿದ ಘಟನೆ ಸಂಭವಿಸಿದೆ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸೋಮವಾರ ನಸುಕಿನ ಜಾವ 2 ಗಂಟೆ ವೇಳೆಗೆ, ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಜೆ-17 ಯುದ್ಧ ವಿಮಾನಗಳಿಂದ ಎಂಟು LS-6 ಬಾಂಬ್‌ಗಳನ್ನು ಬಿರುಗಾಳಿ ರೀತಿಯಲ್ಲಿ ಹಾರಿಸಲಾಯಿತು. ಈ ದಾಳಿಯಿಂದ ಗ್ರಾಮ ನಾಶದ ಅಂಚಿಗೆ ತಲುಪಿದ್ದು, ಭಾರೀ ಪ್ರಮಾಣದ ಸಾವು-ನೋವು ಸಂಭವಿಸಿದೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ಭೀಕರ ದೃಶ್ಯಗಳು ಹರಿದಾಡುತ್ತಿದ್ದು, ಸ್ಥಳೀಯರು ಚೀರಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಈ ದಾಳಿಯಿಂದ ಭಯೋತ್ಪಾದನೆ ನಿಯಂತ್ರಣದ ಹೆಸರಿನಲ್ಲಿ ಸಾಮಾನ್ಯ ಜನರೇ ಬಲಿಯಾಗುತ್ತಿರುವುದು ಮತ್ತೆ ಸ್ಪಷ್ಟವಾಗಿದೆ.
ಇದಕ್ಕೂ ಮೊದಲು ಖೈಬರ್ ಪಖ್ತುಂಖ್ವಾದಲ್ಲಿ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ನಡೆದಿದ್ದರೂ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಕಳೆದ ತಿಂಗಳಿಗಿಂತ ಶೇ.42 ರಷ್ಟು ಹೆಚ್ಚಳ ಕಂಡು, ಈ ವರ್ಷ ಮಾತ್ರವೇ ಕನಿಷ್ಠ 74 ಭಯೋತ್ಪಾದಕ ದಾಳಿಗಳು ದಾಖಲಾಗಿದ್ದು, 90 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಹೆಚ್ಚಿನ ದಾಳಿಗಳು ಖೈಬರ್ ಪಖ್ತುಂಖ್ವಾದಲ್ಲೇ ನಡೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯ ಮುಂದಿನ ಸ್ಥಾನದಲ್ಲಿದೆ.