Friday, November 21, 2025

ಪುಟ್ಟಪರ್ತಿಯಲ್ಲಿ ಗಣ್ಯರ ಸಮ್ಮುಖ, ಮೋದಿ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಸತ್ಯ ಸಾಯಿಬಾಬಾ ಅವರ ಜನ್ಮದಿನಾಚರಣೆಯನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು. ಈ ಪವಿತ್ರ ಕಾರ್ಯಕ್ರಮವು ದೇಶದ ಪ್ರಮುಖ ಗಣ್ಯರ ಮತ್ತು ಖ್ಯಾತನಾಮರ ಉಪಸ್ಥಿತಿಯಿಂದಾಗಿ ವಿಶೇಷ ಮೆರುಗು ಪಡೆದಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಮತ್ತು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಕೂಡ ಉಪಸ್ಥಿತರಿದ್ದರು. ಐಶ್ವರ್ಯಾ ರೈ ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದು, ವೇದಿಕೆ ಏರಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸಿದರು. ಪ್ರಧಾನಿ ಮೋದಿ ಅವರು ಸಹ ನಟಿಯ ತಲೆ ಮೇಲೆ ಕೈ ಇರಿಸಿ ಆಶೀರ್ವದಿಸಿದರು. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಐಶ್ವರ್ಯಾ ರೈ ಅವರ ‘ಮಾನವೀಯತೆ’ ಸಂದೇಶ

ವೇದಿಕೆಯಲ್ಲಿ ಮಾತನಾಡಿದ ಐಶ್ವರ್ಯಾ ರೈ, ಸತ್ಯ ಸಾಯಿಬಾಬಾ ಅವರ ತತ್ವಗಳನ್ನು ನೆನಪಿಸಿಕೊಂಡು ಭಾವುಕರಾದರು. “ಜಗತ್ತಿನಲ್ಲಿ ಇರುವುದು ಒಂದೇ ಒಂದು ಜಾತಿ, ಅದುವೇ ಮಾನವೀಯತೆ. ಒಂದೇ ಧರ್ಮ ಇರುವುದು, ಅದುವೇ ಪ್ರೀತಿ. ಒಂದೇ ಭಾಷೆ ಇರುವುದು, ಅದುವೆ ಹೃದಯದ ಭಾಷೆ. ದೇವರು ಒಬ್ಬನೇ, ಅವನು ಸರ್ವವ್ಯಾಪಿ,” ಎಂದು ನಟಿ ತಮ್ಮ ನುಡಿಗಳನ್ನು ಹಂಚಿಕೊಂಡರು.

ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳು

ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಉಪಸ್ಥಿತಿಗೆ ಕೃತಜ್ಞತೆ ಸಲ್ಲಿಸಿದ ಐಶ್ವರ್ಯಾ, “ಈ ವಿಶೇಷ ಸಂದರ್ಭದಲ್ಲಿ ಇಂದು ನಮ್ಮೊಂದಿಗೆ ಇದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ,” ಎಂದರು.

“ನಿಮ್ಮ ಇಲ್ಲಿನ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಸ್ಪೂರ್ತಿಯನ್ನು ನೀಡುತ್ತದೆ. ನಿಜವಾದ ನಾಯಕತ್ವವೇ ಸೇವೆ. ಮನುಷ್ಯನಿಗೆ ಸೇವೆ ಮಾಡುವುದು ದೇವರಿಗೆ ಸೇವೆ ಮಾಡಿದಂತೆ ಎಂಬ ಸಾಯಿಬಾಬಾ ಅವರ ಮಾತನ್ನು ನಿಮ್ಮ ನಡೆ ನೆನಪಿಸುತ್ತದೆ,” ಎಂದು ಪ್ರಧಾನಿ ಮೋದಿಯವರ ನಾಯಕತ್ವವನ್ನು ಹೊಗಳಿದರು.

error: Content is protected !!