ಮುಂಬರುವ ದೇಶೀಯ ಕ್ರಿಕೆಟ್ ಟೂರ್ನಿಗೆ ಮುನ್ನ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಹೊಸ ನಾಯಕನಿಗೆ ಅವಕಾಶ ಕಲ್ಪಿಸಲು ತಾನೀಗ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ ಎಂದು ರಹಾನೆ ಸ್ಪಷ್ಟಪಡಿಸಿದ್ದಾರೆ.
37 ವರ್ಷದ ರಹಾನೆ ಕಳೆದ ಕೆಲವು ವರ್ಷಗಳಿಂದ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರು. ಅವರ ನಾಯಕತ್ವದಲ್ಲಿ ಮುಂಬೈ ತಂಡವು 2023–24ರ ರಣಜಿ ಟ್ರೋಫಿಯನ್ನು ಗೆದ್ದಿತು. ಏಳು ವರ್ಷಗಳ ಬಳಿಕ ಬಂದ ಆ ಜಯವು ಮುಂಬೈ ಕ್ರಿಕೆಟ್‌ಗೆ ಐತಿಹಾಸಿಕವಾಗಿತ್ತು. ಜೊತೆಗೆ 2024–25ರ ಇರಾನಿ ಟ್ರೋಫಿಯನ್ನು ಸಹ ಮುಂಬೈ ತಂಡವೇ ಎತ್ತಿಕೊಂಡಿತ್ತು.
ರಹಾನೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಹೊರಡಿಸಿ, “ಮುಂಬೈ ತಂಡವನ್ನು ಮುನ್ನಡೆಸುವುದು ಮತ್ತು ಚಾಂಪಿಯನ್‌ಶಿಪ್ ಗೆಲ್ಲುವುದು ನನಗೆ ದೊಡ್ಡ ಗೌರವ. ಆದರೆ ಈಗ ಹೊಸ ನಾಯಕನನ್ನು ರೂಪಿಸಲು ಸರಿಯಾದ ಸಮಯ ಬಂದಿದೆ. ಮುಂದಿನ ದಿನಗಳಲ್ಲಿ ಕೇವಲ ಆಟಗಾರನಾಗಿ ನನ್ನ ಶ್ರೇಷ್ಠ ಕೊಡುಗೆಯನ್ನು ನೀಡುತ್ತೇನೆ” ಎಂದು ಹೇಳಿದ್ದಾರೆ.
ಅಂದರೆ, ನಾಯಕತ್ವ ತ್ಯಜಿಸಿದರೂ ರಹಾನೆ ಮುಂದುವರೆದೂ ಮುಂಬೈ ಪರ ಆಟವಾಡಲಿದ್ದಾರೆ. ಹೀಗಾಗಿ ಮುಂಬರುವ ರಣಜಿ ಸೀಸನ್‌ನಲ್ಲಿ ಅವರು ಹಿರಿಯ ಬ್ಯಾಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬೈ ತಂಡದ ಮುಂದಿನ ನಾಯಕ ಯಾರು?
ಮುಂಬೈ ತಂಡದಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಝ್ ಖಾನ್ ಅವರಂತಹ ಪ್ರಮುಖ ಆಟಗಾರರು ಇದ್ದಾರೆ. ಅವರಲ್ಲಿ ಅಯ್ಯರ್ ಈಗಾಗಲೇ ಮೂರು ಐಪಿಎಲ್ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ಫಾರ್ಮ್ಯಾಟ್‌ನಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ಅಯ್ಯರ್ ಮತ್ತು ಸೂರ್ಯಕುಮಾರ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ಸಂಭವಿಸುವ ಸಾಧ್ಯತೆ ಇದೆ.