Saturday, November 15, 2025

‘ಅಲೇ ಬುಡಿಯರ್’: ಇಂದಿನಿಂದ ಕಂಬಳ ಸೀಸನ್! ಎಲ್ಲಿ? ಯಾವಾಗ? ಇಲ್ಲಿದೆ ಲಿಸ್ಟ್!

ಹರೀಶ್ ಕೊಡೆತ್ತೂರು

ತುಳುನಾಡಿನ ಘನತೆಯ ಜಾನಪದ ಕ್ರೀಡೆ ಕಂಬಳದ ಈ ವರ್ಷ ಸೀಸನ್ ಇಂದಿನಿಂದ ಪ್ರಾರಂಭಗೊಳ್ಳಲಿದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ ಮಹತ್ವವಿರುವ ಕಂಬಳ ಕೇವಲ ಮನೋರಂಜನೆಯ ಕ್ರೀಡೆಯಲ್ಲ. ಈ ವರ್ಷದ ಸೀಸನ್ ನ. 15ರಂದು ಪಣಪಿಲ ಜಯ-ವಿಜಯ ಕಂಬಳದೊಂದಿಗೆ ಆರಂಭವಾಗಿ ಏ. 25ರ ಬಡಗಬೆಟ್ಟು ಕಂಬಳದೊಂದಿಗೆ ಮುಕ್ತಾಯಗೊಳ್ಳಲಿದೆ. ಕಳೆದ ಸೆ. 28ರಂದು ಮೂಡುಬಿದಿರೆಯಲ್ಲಿ ನಡೆದ ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ಕಂಬಳ ವ್ಯವಸ್ಥಾಪಕರ ಜಂಟಿ ಸಭೆಯಲ್ಲಿ 2025-26ರ ಸಾಲಿನ ಕಂಬಳಗಳ ದಿನಾಂಕ ನಿಗದಿಯಾಗಿದೆ. ಈ ವರ್ಷ 25 ಕಂಬಳಗಳು ನಡೆಯಲಿವೆ. ಕಳೆದ ಕಂಬಳ ಋತುವಿನಲ್ಲಿ 21 ಕಂಬಳಗಳು ನಡೆದಿದೆ. ಪಿಲಿಕುಳ ಬಾರಾಡಿ, ಬಂಗಾಡಿ ಕಂಬಳಗಳು ನಡೆದಿರಲಿಲ್ಲ. ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆಸುವುದೆಂದು ತೀರ್ಮಾನವಾಗಿದ್ದರೂ ನ್ಯಾಯಾಲಯದಲ್ಲಿ ತೀರ್ಪು ಬಾಕಿಯಿರುವುದರಿಂದ ನಡೆದಿಲ್ಲ. ಕಳೆದ ವರ್ಷದ ಗುರುಪುರ ಕಂಬಳದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಮೈಸೂರು ದಸರಾದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. ಆದರೆ ಅದು ಕೈಗೂಡಲಿಲ್ಲ.

ಕಂಬಳ ಪರವಾದ ತೀರ್ಪು :
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹೊರಗೂ ಕಂಬಳ ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪೆಟಾ ಸಂಘಟನೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ರಾಜ್ಯ ಇತರ ಭಾಗಗಳಲ್ಲೂ ಕಂಬಳ ನಡೆಸಲು ಅನುಮತಿ ನೀಡಿದೆ. ಅ. 14ರ ಮಂಗಳವಾರ ನಡೆದ ವಿಚಾರಣೆಯಲ್ಲಿ ಕಾಯ್ದೆ ಮತ್ತು ನಿಯಮಗಳನ್ನು ಅನುಸರಿಸಿ ರಾಜ್ಯದ ಇತರ ಭಾಗಗಳಲ್ಲೂ ಕಂಬಳ ನಡೆಸಬಹುದು ಎಂದಿತ್ತು. ರಾಜ್ಯದ ಒಂದು ಭಾಗದ ಸಂಪ್ರದಾಯ ಇಡೀ ರಾಜ್ಯದ ಸಂಸ್ಕೃತಿಯ ಭಾಗವಾಗಿದೆ ಅದನ್ನು ವಿಭಾಗಿಸಲು ಸಾಧ್ಯವಿಲ್ಲ ಎಂದು ಕಾನೂನು ರೀತಿ ಕಂಬಳ ನಡೆಸಲು ಅನುಮತಿ ನೀಡಿತ್ತು. ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲಾಡಳಿತವು ಪಿಳಿಕುಳದಲ್ಲಿ ಕಂಬಳ ನಡೆಸುವ ತೀರ್ಮಾನಕ್ಕೆ ಬಂದಿತ್ತು. ಆದರೆ ಪಿಳಿಕುಳವು `ಜೈವಿಕ ಉದ್ಯಾನವನ’ ಎಂದು ಗುರುತಿಸಿರುವ ಕಾರಣ ಅನುಮತಿಯನ್ನು ತಡೆಹಿಡಿದಿತ್ತು. ಒಂದು ವೇಳ ಕಂಬಳದ ಪರವಾಗಿ ತೀರ್ಪು ಬಂದರೆ ಅದು ನಡೆಯುವ ಸಾಧ್ಯತೆಯಿದೆ.

2014ರಲ್ಲಿ ನಡೆದಿತ್ತು ಪಿಲಿಕುಳ ಕಂಬಳ :
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನ ಮನೆಯ ಮುಂಭಾಗದಲ್ಲಿ `ನೇತ್ರಾವತಿ-ಫಲ್ಗುಣಿ’ ಜೋಡುಕರೆಯಲ್ಲಿ ೮೫ ಜತೆ ಕೋಣಗಳು ಪಾಲ್ಗೊಂಡಿದ್ದವು. ಆ ಬಳಿಕ ಕಂಬಳ ವಿರುದ್ಧ ಪೆಟಾ ಸಂಸ್ಥೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿರುವುದರಿಂದ ಕಂಬಳ ಸ್ಥಗಿತಗೊಂಡಿತ್ತು. ಬಳಿಕ ಹಲವಾರು ಕಾನೂನಾತ್ಮಕ ಬದಲಾವಣೆಗಳನ್ನು ತಂದರೂ ಪಿಲಿಕುಳ ಕಂಬಳ ನಡೆದಿರಲಿಲ್ಲ. ಕಳೆದ ವರ್ಷ ಜಿಲ್ಲಾಡಳಿತ ಕರೆ ನಿರ್ಮಾಣ ಸಹಿತ ಕಂಬಳದ ಎಲ್ಲಾ ಪೂರ್ವ ಸಿದ್ಧತೆಯನ್ನು ನಡೆಸಿದರೂ ನ್ಯಾಯಾದಯದಲ್ಲಿ ಕೇಸು ಇತ್ಯರ್ಥವಾಗದೆ ಕಂಬಳ ನಡೆಸಲಾಗಲಿಲ್ಲ.

ಕಂಬಳ ಫೆಡರೇಶನ್ ಅಪ್ ಇಂಡಿಯಾ :
ಮುಖಮಂತ್ರಿಯವರ ಆದೇಶದಂತೆ ರಾಜ್ಯ ಸರಕಾರವು ಕಂಬಳಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆಯನ್ನು ನೀಡಿ ಪುರಸ್ಕರಿಸಿದೆ. ರಾಜ್ಯ ಕಂಬಳ ಅಸೋಸಿಯೇಶನ್ ಮತ್ತು ಕೇಂದ್ರ ಸರಕಾರದಿಂದ ವಿಶೇಷ ಮಾನ್ಯತೆ ನೀಡಲು ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಸೋಸಿಯೇಶನ್ ಅಸ್ತಿತ್ವಕ್ಕೆ ಬಂದಿರುವುದರಿಂದ ಸರಕಾರದ ನಿರ್ದೇಶನದಂತೆ ನಡೆಯುತ್ತದೆ. 2008-2014ರ ವರೆಗೆ ಒಟ್ಟು 6 ಕಂಬಳಗಳು ಪಿಲಿಕುಳ ಗುತ್ತಿನ ಮನೆಯ ಮುಂಭಾಗ ನಡೆದಿವೆ. ಕಾನೂನು ತೊಡಕು, ಕೋವಿಡ್ ಕಾರಣದಿಂದ ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ಮತ್ತೆ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ಅದು ಕಳೆದ ವರ್ಷವೂ ಕೈಗೂಡಲಿಲ್ಲ.

ಸಮಯದ ಮಿತಿಯೊಳಗೆ ಕಂಬಳ :
ಈ ವರ್ಷದಿಂದ ರಾಜ್ಯ ಕಂಬಳ ಅಸೋಸಿಯೇಶನ್ ತೀರ್ಮಾನದಂತೆ ಸಬ್ ಜ್ಯೂನಿಯರ್ ವಿಭಾಗವನ್ನು ಕೈ ಬಿಡಲಾಗಿದೆ. ಸಮಯದ ಪಾಲನೆಯೊಂದಿಗೆ ಶಿಸ್ತುಬದ್ಧವಾಗಿ ಕಂಬಳಗಳನ್ನು ನಡೆಸಲು ಎಲ್ಲಾ ಸಂಘಟಕರು ಬದ್ಧರಾಗುವಂತೆ ನಿರ್ದೇಶನ ನೀಡಿದೆ. ಕಳೆದ ವರ್ಷ ಕೆಲವು ಕಂಬಳದಲ್ಲಿ ಮಾತ್ರ ಸಮಯ ಕೊಂಚ ಅಧಿಕವಾಗಿದ್ದರೂ ಉಳಿದೆಡೆ ನಿಗದಿತ ಸಮಯದೊಳಗೆ ಮುಗಿದಿದೆ. ಹಲವು ದಾಖಲೆಗಳು ನಡೆದಿವೆ. ಕಂಬಳದಲ್ಲಿ ನಿಖರ ಫಲಿತಾಂಶ ಸಹಿತ ಕ್ರೀಡೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ನೂತನವಾಗಿ ಸ್ವಯಂ ಚಾಲಿತ ಗೇಟ್ ಹಾಗೂ ಫೋಟೋ ಫಿನಿಶ್ ತಂತ್ರಜ್ಞಾನ ಅಳವಡಿಕೆಗೆಯಾಗಿದೆ. ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರಾಣಿಗಳ ಓಟದಲ್ಲಿ ಇರುವ ತಂತ್ರಜ್ಞಾನವನ್ನು ಕಂಬಳಕ್ಕೆ ಕೂಡ ಅಳವಡಿಸಲಾಗಿದೆ.

ಐದು ದಶಕಗಳ ಬಳಿಕ ಎರ್ಮಾಳು ಕಂಬಳ :
ಸುಮಾರು ಐದು ದಶಕಗಳ ಬಳಿಕ ಮರು ಆರಂಭಗೊಳ್ಳಿರುವ ಎರ್ಮಾಳು ಬಡಕೊಟ್ಟು ಬಾಕ್ಯಾರು ಗದ್ದೆಯಲ್ಲಿ ಪುನರಾರಂಭಗೊಳ್ಳಲಿದೆ. 2026ರ ಫೆ. 28ರಂದು ಬಡಕೊಟ್ಟು ಬಾಕ್ಯಾರು ಗದ್ದೆಯಲ್ಲಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳ ಆಯೋಜಿಸಲಾಗಿದೆ. ಎರ್ಮಾಳು ಕಂಬಳಕ್ಕೆ 600 ವರ್ಷದ ಇತಿಹಾಸವಿದ್ದು ಕಳೆದ ಐದು ದಶಕಗಳಿಂದ ಎರ್ಮಾಳು ಕಂಬಳ ಸ್ಥಬ್ಧವಾಗಿದ್ದು ಈಗ ಮತ್ತೆ ಮರು ಪ್ರಾರಂಭಗೊಳ್ಳುತ್ತಿರುವುದು ಕಂಬಳಾಭಿಮಾನಿಗಳಿಗೆ ಸಂತಸ ತಂದಿದೆ.

ಜುಲೈನಲ್ಲೇ ಕುದಿ' ನಡೆದಿತ್ತು! ಕಂಬಳಕ್ಕೆ ನಾಲ್ಕು ತಿಂಗಳು ಬಾಕಿಯಿರುವಾಗಲೇಕುದಿ ಕಂಬಳ’ ನಡೆದಿತ್ತು! ಕುದಿ ಕಂಬಳವೆಂದರೆ ಕಂಬಳ ಋತುವಿನ ಮುನ್ನ ಕೋಣಗಳಿಗೆ ನಡೆಸುವ ತಾಲೀಮು. ಕಂಬಳ ಹೊಸ ಋತುವಿಗೆ ಮುನ್ನ ಕೋಣಗಳು ಮತ್ತು ಓಟಗಾರರಿಗೆ ಸಿದ್ಧತೆಗಾಗಿ ಇದನ್ನು ನಡೆಸಲಾಗುತ್ತದೆ. ಕೋಣ ಓಟದ ಟೈಮಿಂಗ್, ಬೇರೆ ಬೇರೆ ಕೋಣೆಗಳ ಜೊತೆ ಹೊಂದಾಣಿಕೆಯ ಓಟದ ತಾಲೀಮು ಇಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ಕಂಬಳ ಋತು ಆರಂಭಕ್ಕೆ ಒಂದೆರಡು ತಿಂಗಳು ಮೊದಲು ಪ್ರಮುಖ ಕಂಬಳ ಕರೆಗಳಲ್ಲಿ ಕುದಿ ಕಂಬಳ ನಡೆಯುತ್ತದೆ. ಮಿಯಾರು, ನರಿಂಗಾನ ಮುಂತಾದ ಕಡೆಗಳಲ್ಲಿ ಕುದಿ ಕಂಬಳ ನಡೆದಿದೆ.

error: Content is protected !!