ಹೊಸದಿಗಂತ ಡಿಜಿಟಲ್ ಡೆಸ್ಕ್
ಕಾಡ್ಗಿಚ್ಚು ಹಬ್ಬಲು ಕಾರಣೀಕರ್ತ ಎಂದು ಶಂಕಿಸಿ ವರ್ಣಚಿತ್ರಕಾರನೊಬ್ಬನನ್ನು ಕ್ರೂರವಾಗಿ ಕೊಂದಿದ್ದ 49 ಜನರಿಗೆ ಅಲ್ಜೀರಿಯಾದ ನ್ಯಾಯಾಲಯವು ಮರಣದಂಡನೆ ವಿಧಿಸಿದೆ.
ಕಳೆದ ವರ್ಷ ಈಶಾನ್ಯ ಅಲ್ಜೀರಿಯಾದ ಕಬಿಲಿ ಪ್ರದೇಶದಲ್ಲಿ ನಡೆದ ಹತ್ಯೆಯು ದೇಶವನ್ನು ಬೆಚ್ಚಿಬೀಳಿಸಿತ್ತು.
ಆಗಸ್ಟ್ 2021 ರಲ್ಲಿ ಅಲ್ಲಿನ ಪರ್ವತಮಯ ಬರ್ಬರ್ ಪ್ರದೇಶವು ಏಕಾಏಕಿ ಕಾಳ್ಗಿಚ್ಚುಗಳಿಂದ ತತ್ತರಿಸುತ್ತಿತ್ತು. ಈ ಬೆಂಕಿ ಜ್ವಾಲೆಯನ್ನು ನಂದಿಸಲು ಯತ್ನಿಸುತ್ತಿರುವಾಗ ಸೈನಿಕರು ಸೇರಿದಂತೆ ಸುಮಾರು 90 ಜನರು ಮೃತಪಟ್ಟಿದ್ದರು.
ಈ ಕಾಳ್ಗಿಚ್ಚು ಹಬ್ಬಲು ಕಲಾವಿದ ಜಾಮೆಲ್ ಬೆನ್ ಇಸ್ಮಾಯಿಲ್ ಅವರೇ ಕಾರಣ ಎಂದು ಶಂಕಿಸಿದ ಕೋಪೋದ್ರಿಕ್ತ ಗುಂಪು ಆತನನ್ನು ಹತ್ಯೆ ಮಾಡಿತ್ತು. ಕಾಡ್ಗಿಚ್ಚು ಉಲ್ಬಣಗೊಂಡಾಗ, ಬೆನ್ ಇಸ್ಮಾಯಿಲ್ ಅವರು ತಮ್ಮ ಮನೆಯಿಂದ 320 ಕಿಲೋಮೀಟರ್ (200 ಮೈಲುಗಳು) ದೂರದಲ್ಲಿರುವ ಕಬಿಲಿ ಪ್ರದೇಶಕ್ಕೆ ಬೆಂಕಿಯ ವಿರುದ್ಧ ಹೋರಾಡಲು ತೆರಳುತ್ತಿರುವುದಾಗಿ ಸ್ನೇಹಿತರಿಗೆ ಟ್ವಿಟ್ ಮಾಡಿ ಹೊರಟಿದ್ದರು.
ಈ ಹತ್ಯೆ ಸಂಬಂಧ 100 ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರಲ್ಲಿ 49 ಮಂದಿ ತಪ್ಪಿತಸ್ಥರು ಎಂದು ಕಂಡುಬಂದಿದ್ದು ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ