ಹೊಸದಿಗಂತ ಹುಬ್ಬಳ್ಳಿ:
ಅಧಿಕಾರಿ ಅಥವಾ ಸೆಲೆಬ್ರಿಟಿ ಆಗಿರಲಿ, ಯಾರೇ ಆಗಿರಲಿ ಅಮಾನವೀಯವಾಗಿ ವರ್ತನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಕಾನೂನು ಕೈಗೆತ್ತಿಕೊಳ್ಳುವುದೆ ಅಪರಾಧವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸಹ ಕಾನೂನಿನ ವಿರುದ್ಧ ಹೋಗಬಾರದು. ಕಾನೂನಿನ ಮುಂದೆ ನಾವೆಲ್ಲರೂ ಸಮಾನರು ಎಂದರು.
ಕೊಲೆ ಪ್ರಕರಣ ಬಹಳ ಗಂಭೀರವಾಗಿದೆ. ಕೆಲವೊಂದು ಸಾಂದರ್ಭಿಕ, ಪೂರ್ವ ನಿಯೋಜಿತ ಕೊಲೆಗಳಾಗುತ್ತವೆ. ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಪೊಲೀಸರು ಈಗ ಯಾವ ರೀತಿ ಆಸಕ್ತಿಯಿಂದ ತನಿಖೆ ನಡೆಸುತ್ತಿದ್ದಾರೂ ಅದೇ ರೀತಿ ಕೊನೆಯವರೆಗೂ ಪ್ರಮಾಣಿಕವಾಗಿ ನಡೆಸಬೇಕು ಎಂದು ಹೇಳಿದರು.
ಶಿಂಗ್ಗಾವ ವಿಧಾನ ಸಭೆಗೆ ಕ್ಷೇತ್ರಕ್ಕೆ ನಾನು ಇನ್ನೂ ರಾಜೀನಾಮೆ ನೀಡಿಲ್ಲ. ರಾಜೀನಾಮೆ ನೀಡಿದ ಬಳಿಕ ಚುನಾವಣಾ ಪ್ರಕ್ರಿಯೆ ಶುರುವಾಗುತ್ತದೆ. ಕೇಂದ್ರ ವರಿಷ್ಠರು ಅಭ್ಯರ್ಥಿ ಆಯ್ಕೆಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದರು.
ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಸೂಕ್ತ ನ್ಯಾಯ ನೀಡಿದ್ದು, ಉತ್ತರ ಕರ್ನಾಟಕಕ್ಕೆ ಯಾವುದೇ ರೀತಿ ಅನ್ಯಾಯ ಮಾಡಿಲ್ಲ. ನಾನು ಸಹ ಮಂತ್ರಿಮಂಡಳ ರಚನೆಯಲ್ಲಿ ಭಾಗಿಯಾಗಿದ್ದು, ಖುಷಿಯಾಗಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.