ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಾದ್ಯಂತ ಅಪಾರ ಜನಪ್ರಿಯತೆ ಗಳಿಸಿರುವ ಭಾರತೀಯ ನಟ, ‘ಬಾಲಿವುಡ್ ಬಾದ್‌ಶಾ’ ಶಾರುಖ್ ಖಾನ್ ಅವರ ಹೆಸರಿನಲ್ಲಿ ದುಬೈನಲ್ಲಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಗೋಪುರ ಈಗ ಭಾರೀ ಸುದ್ದಿಯಲ್ಲಿದೆ. ಪ್ರತಿಷ್ಠಿತ ಶೇಖ್ ಜಾಯೇದ್ ರಸ್ತೆಯಲ್ಲಿ ತಲೆ ಎತ್ತಲಿರುವ ಈ ‘ಶಾರುಖ್ ಟವರ್’ನ ಎಲ್ಲಾ ಕಚೇರಿ ಸ್ಥಳಗಳು ಕಟ್ಟಡದ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಮಾರಾಟವಾಗಿವೆ!
ಭಾರತ ಮೂಲದ ಉದ್ಯಮಿ ರಿಜ್ವಾನ್ ಸಾಜನ್ ಮಾಲಕತ್ವದ ಡ್ಯಾನೂಬ್ ಗ್ರೂಪ್ ಸುಮಾರು ₹3,500 ಕೋಟಿ ವೆಚ್ಚದಲ್ಲಿ ಈ 55 ಮಹಡಿಗಳ ಗೋಪುರವನ್ನು ನಿರ್ಮಿಸುತ್ತಿದೆ. ಆದರೆ, ಈ ಆಫೀಸ್ ಸ್ಪೇಸ್‌ಗಳಿಗೆ ಸೃಷ್ಟಿಯಾದ ಭಾರಿ ಬೇಡಿಕೆಯಿಂದಾಗಿ, ನಿರೀಕ್ಷೆಗೂ ಮೀರಿ ₹5,000 ಕೋಟಿಗೂ (2.1 ಬಿಲಿಯನ್ ದಿರ್ಹಮ್‌ಗಳು) ಅಧಿಕ ಮೊತ್ತಕ್ಕೆ ಮಾರಾಟವಾಗಿರುವುದು ಗಮನಾರ್ಹ.
ಸುಮಾರು ಒಂದು ಮಿಲಿಯನ್ ಚದರಡಿ ವಿಸ್ತೀರ್ಣ ಹೊಂದಿರುವ ಈ ಐಷಾರಾಮಿ ಟವರ್‌ನಲ್ಲಿ ಒಟ್ಟು 488 ಯೂನಿಟ್‌ಗಳಿವೆ. ಪ್ರತಿ ಯೂನಿಟ್ ಕನಿಷ್ಠ 2 ಮಿಲಿಯನ್ ದಿರ್ಹಮ್ ಬೆಲೆಯಿಂದ ಆರಂಭವಾಗಿದ್ದರೂ, ಟವರ್‌ಗೆ ಅಭೂತಪೂರ್ವ ಬೇಡಿಕೆ ವ್ಯಕ್ತವಾಗಿದೆ.
ದುಬೈನಲ್ಲಿ ಶಾರುಖ್ ಖಾನ್ ಅವರ ಜನಪ್ರಿಯತೆಯನ್ನು ಮನಗಂಡಿರುವ ಡ್ಯಾನೂಬ್ ಗ್ರೂಪ್, ಶೀಘ್ರದಲ್ಲೇ ದುಬೈನಲ್ಲಿ ಮತ್ತೊಂದು ಸೇರಿದಂತೆ ನ್ಯೂಯಾರ್ಕ್ ಮತ್ತು ಲಂಡನ್‌ನಲ್ಲೂ ‘ಶಾರುಖ್ ಟವರ್ಸ್’ ನಿರ್ಮಿಸಲು ಯೋಜಿಸುತ್ತಿದೆ. ಇದರ ಜೊತೆಗೆ, ಭಾರತದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈನಲ್ಲಿ ಸಹ ಇಂತಹ ಗೋಪುರಗಳು ತಲೆ ಎತ್ತಲಿವೆ ಎಂದು ತಿಳಿದುಬಂದಿದೆ.
ಡ್ಯಾನೂಬ್ ಗ್ರೂಪ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆಯಿಂದ ಹಿಡಿದು ಬೃಹತ್ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸುವವರೆಗೆ ಬೆಳೆದಿದೆ. ದುಬೈನ ವಿಶ್ವ ವಿಖ್ಯಾತ ಬುರ್ಜ್ ಖಲೀಫಾ ಟವರ್ ನಿರ್ಮಾಣಕ್ಕೂ ಈ ಕಂಪನಿಯು ಸಾಮಗ್ರಿಗಳನ್ನು ಪೂರೈಸಿತ್ತು. ಈ ಗುಂಪಿನ ಮಾಲೀಕ ರಿಜ್ವಾನ್ ಸಾಜನ್ ಅವರು ಮುಂಬೈ ಮೂಲದವರಾಗಿದ್ದು, 16ನೇ ವಯಸ್ಸಿನಲ್ಲಿ ದುಬೈಗೆ ಹೋಗಿ ಇಂದು ಅಲ್ಲಿನ ಪ್ರಮುಖ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

