January20, 2026
Tuesday, January 20, 2026
spot_img

ನಮಗೆ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ, ಸುಳ್ಳು ಆರೋಪಗಳಿಗೆ ಹೆದರಲ್ಲ: ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತಗಳ್ಳತನ ಆಗಿದೆ ಎನ್ನುವ ಆರೋಪಕ್ಕೆ ಇಂದು ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಖಡಕ್ ಉತ್ತರ ನೀಡಿದೆ.

ಚುನಾವಣಾ ಆಯೋಗಕ್ಕೆ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ. ಯಾವುದಕ್ಕೂ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು ರಾಜಕೀಯ ಪಕ್ಷಗಳೊಂದಿಗೆ ಸೇರಿ ಡ್ರಾಫ್ಟ್ ರಚಿಸುತ್ತಾರೆ. ಅದಾದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು 45 ದಿನಗಳು ಸಮಯಾವಕಾಶ ಕೊಡಲಾಗಿರುತ್ತದೆ. ಈ ಅವಧಿ ಬಹಳ ಮುಖ್ಯ. ತಪ್ಪುಗಳಾಗಿದ್ದಲ್ಲಿ ತಿದ್ದಿಕೊಳ್ಳಬಹುದು. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಹೊಂದಿರುತ್ತವೆ. ಆ 45 ದಿನಗಳ ಅವಧಿಯಲ್ಲಿ ಆಕ್ಷೇಪಣೆಗಳು ಬರದೆ ಈಗ ಬಂದರೆ ಹೇಗೆ? ಇದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಮುಖ್ಯ ಚುನಾವಣಾ ಆಯುಕ್ತರು ಕಿಡಿಕಾರಿದ್ದಾರೆ.

ಮತಗಳ್ಳತನ ಆಗಿದೆ ಎನ್ನುವ ಆರೋಪ ಸರಿಯಾದುದಲ್ಲ. ಸುಳ್ಳು ಹೇಳುವ ಮೂಲಕ ತಾವು ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿ. ಆಯೋಗದ ಹೆಗಲು ಮೇಲೆ ಬಂದೂಕು ಇಟ್ಟು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳಿಗೆ ಚುನಾವಣಾ ಆಯುಕ್ತ ಹೆದರುವುದಿಲ್ಲ ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ವೋಟರ್ ಐಡಿ ಕಾರ್ಡ್ ಹೊಂದಿರುವ ಹಲವಾರು ಪ್ರಕರಣಗಳಿವೆ ಎನ್ನುವ ಆರೋಪಕ್ಕೆ ಉತ್ತರ ನೀಡಿದ ಅವರು, ಆ ರೀತಿ ಬಹು ಐಡಿ ಕಾರ್ಡ್ ಹೇಗೆ ಆಗಿರುತ್ತವೆ ಎನ್ನುವ ವಿವರಣೆಯನ್ನೂ ನೀಡಿದ್ದಾರೆ.

ಒಂದು ಸ್ಥಳದಲ್ಲಿ ವೋಟರ್ ಐಡಿ ಹೊಂದಿರುವ ವ್ಯಕ್ತಿ ಬೇರೆ ಊರಿಗೆ ಹೋದಾಗ ಅಲ್ಲಿ ವೋಟರ್ ಐಡಿ ಪಡೆಯಬಹುದು. ಹಿಂದಿನ ಸ್ಥಳದಲ್ಲಿದ್ದ ವೋಟರ್ ಐಡಿ ಹಾಗೆಯೇ ಉಳಿದುಕೊಳ್ಳುವ ಸಂಭವ ಇರುತ್ತದೆ. ಫಾರ್ಮ್ ಸಲ್ಲಿಸಿ ಹಿಂದಿನದನ್ನು ತೆಗೆದುಹಾಕಬಹುದು. ಹಾಗೆ ಮಾಡದೇ ಇದ್ದಾಗ ಬೇರೆ ಬೇರೆ ಸ್ಥಳಗಳಲ್ಲಿನ ವೋಟರ್ ಐಡಿಗಳು ಉಳಿದುಕೊಳ್ಳಬಹುದು ಎಂದು ಜ್ಞಾನೇಶ್ ಕುಮಾರ್ ವಿವರಿಸಿದ್ದಾರೆ.

Must Read