ಹೊಸದಿಗಂತ ಆನ್‌ಲೈನ್ ಡೆಸ್ಕ್
ಹಿಜಾಬ್ ವಿವಾದವನ್ನು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ರಾಜಕೀಯಗೊಳಿಸಲು ನಡೆಸುವ ಯತ್ನ ಸಫಲವಾಗದು ಎಂದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಎಲ್ಲ ವಿದ್ಯಾರ್ಥಿಗಳು -ಅವರು ಯಾವುದೇ ಜಾತಿ,ಮತ, ಧರ್ಮಕ್ಕೆ ಸೇರಿರಲಿ ಶಾಲಾ ಸಮವಸ್ತ್ರ ನಿಯಮವನ್ನು ಪಾಲಿಸುವುದು ಅತ್ಯಗತ್ಯ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ. ಅವರು ಸಿಎನ್‌ಎನ್ ನ್ಯೂಸ್ ೧೮ಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಶಾಲೆಗಳಲ್ಲಿ ಧರ್ಮ-ನಂಬಿಕೆಗಳಿಗೆ ಮೀರಿದ ನಡವಳಿಕೆ ವಿದ್ಯಾರ್ಥಿಗಳದಾಗಿರಬೇಕು.ಹಿಜಾಬ್ ಪ್ರಕರಣವೀಗ ನ್ಯಾಯಾಲಯದಲ್ಲಿದೆ. ಇದನ್ನು ಎಲ್ಲರೂ ಒಪ್ಪಬೇಕು.ತೀರ್ಪು ಬರುವವರೆಗೂ ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ವಿದ್ಯಾರ್ಥಿಗಳು ಯಾವುದೇ ನಂಬಿಕೆ, ಮತ, ಧರ್ಮಕ್ಕೆ ಸೇರಿದ್ದರೂ ಶಾಲಾ ಸಮವಸ್ತ್ರ ನಿಯಮಕ್ಕೆ ಬದ್ಧರಾಗಿರಬೇಕು .ನ್ಯಾಯಾಲಯ ತೀರ್ಪು ನೀಡಿದ ಅನಂತರ ಎಲ್ಲರೂ ಅದನ್ನು ಸ್ವೀಕರಿಸಬೇಕು ಎಂದು ಶಾ ಹೇಳಿದರು.
ಉಡುಪಿಯ ಸರಕಾರಿ ಕಾಲೇಜಿನಲ್ಲಿನ ಸುಮಾರು 100 ಮುಸ್ಲಿಂ ಬಾಲಕಿಯರ ಪೈಕಿ ಆರು ಮಂದಿ ಹಿಜಾಬ್ ಹೆಸರಿನಲ್ಲಿ ವಿವಾದ ಸೃಷ್ಟಿಸಿದ ಬಳಿಕ , ಮತೀಯವಾದಿ ಗುಂಪು ಮತ್ತು ವಿಪಕ್ಷ ಕಾಂಗ್ರೆಸ್ ಕುಮ್ಮಕ್ಕಿನೊಂದಿಗೆ ಇದು ಹಲವೆಡೆ ವಿಸ್ತರಿಸಿ ರಾಜ್ಯದಲ್ಲಿ ಶಾಲಾ ಶಿಕ್ಷಣಕ್ಕೆ ಭಾರೀ ಅಡಚಣೆ ಉಂಟು ಮಾಡಿರುವುದಿಲ್ಲಿ ಉಲ್ಲೇಖನೀಯ.