ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯಲ್ಲಿ ಮೇ 1ರಿಂದ ಮೇ 26ರ ವರೆಗೆ 307.9 ಮಿ.ಮೀ.ನಷ್ಟು ಮಳೆಯಾಗಿದ್ದು, ಇದು ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ದಾಖಲಾಗಿರುವ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ.
2023ರಲ್ಲಿ ಬೆಂಗಳೂರಿನಲ್ಲಿ ಸುರಿದ 305.4 ಮಿ.ಮೀ ಮಳೆಯು ಸರ್ವಕಾಲಿಕ ದಾಖಲೆ ಮಳೆಯಾಗಿತ್ತು. ಆದರೆ, 2025ರ ಮೇ 1 ರಿಂದ ಮೇ 26ರ ವರೆಗೆ ಸುರಿದಿರುವ 307.9 ಮಿ.ಮೀ.ನಷ್ಟು ಮಳೆಯು ಬೆಂಗಳೂರಿನ ಮೇ ಮಾಸದಲ್ಲಿ ಸುರಿದಿರುವ ಸಾರ್ವಕಾಲಿಕ ದಾಖಲೆಯ ಮಳೆಯಾಗಿದೆ. ಮುಂಗಾರು ಪ್ರವೇಶಕ್ಕೂ ಮುನ್ನ ಬೆಂಗಳೂರಿನಲ್ಲಿ ಇದುವರೆಗೆ ಸಾಧಾರಣ ಹಗುರದಿಂದ ಕೂಡಿದ ಮಳೆಯಾಗುತ್ತಿತ್ತು.
ಮುಂಗಾರು ಶುರುವಾದ ಬಳಿಕ ಜೂನ್ ನಂತರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿಯು ಬೆಂಗಳೂರಿಗೆ ಮುಂಗಾರು ವಾಡಿಕೆಗಿಂತ ಬೇಗ ಪ್ರವೇಶಿಸಿದೆ. ಇದಲ್ಲದೇ, ಮೇ ತಿಂಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಟ್ರಫ್ ಇದ್ದ ಹಿನ್ನೆಲೆಯಲ್ಲಿ ದಾಖಲೆಯ ಮಳೆ ಸುರಿದಿದೆ. ಇನ್ನು ಈ ಬಾರಿ ಬೆಂಗಳೂರಿನಲ್ಲಿ ಮಾರ್ಚ್ 1 ರಿಂದ ಮೇ 26ರ ವರೆಗೆ 340.6 ಮಿ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ 2 ತಿಂಗಳಲ್ಲಿ 133.5 ಮಿ.ಮೀ ವಾಡಿಕೆ ಮಳೆಯಾಗಿದೆ. ಆದರೆ, ವಾಡಿಕೆಗಿಂತ 155 ಮಿ.ಮೀ ಹೆಚ್ಚುವರಿ ಮಳೆ ಸುರಿದಿದೆ.
ಐಎಂಡಿ ಪ್ರಕಾರ, ನಗರವು ಮೇ 2024 ರಲ್ಲಿ 181.5 ಮಿಮೀ ಮಳೆಯನ್ನು ದಾಖಲಿಸಿದೆ. ಮೇ 2022 ರಲ್ಲಿ, ಈ ಸಂಖ್ಯೆ 270.2 ಮಿಮೀ. ಸೋಮವಾರ ಸಂಜೆ 5.30 ರವರೆಗೆ, ಬೆಂಗಳೂರು ನಗರದಲ್ಲಿ 5 ಮಿಮೀ ಮಳೆಯಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 3.6 ಮಿ.ಮೀ., ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹವಾಮಾನ ಕೇಂದ್ರದಲ್ಲಿ 0.4 ಮಿ.ಮೀ. ಮಳೆ ದಾಖಲಾಗಿದೆ.