ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಸಮಯ ಕರ್ನಾಟಕದಲ್ಲೂ ಕಳ್ಳಾಟವಾಗಿದೆ ಎಂಬ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ರಿಯಾಕ್ಷನ್ ನೀಡಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶ ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಮಾಲೋಚನೆ ನಡೆಸಿ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ನಡೆದಿರುವ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ನಮಗೆ ಆಶ್ಚರ್ಯವನ್ನು ಉಂಟುಮಾಡಿದ್ದು ಮಾತ್ರವಲ್ಲ, ಹಲವಾರು ಬಗೆಯ ಅನುಮಾನಗಳನ್ನು ಕೂಡಾ ಹುಟ್ಟುಹಾಕಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿರುವ ಅಕ್ರಮವೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ.
ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ನಡೆಸಿರುವ ಅಕ್ರಮಗಳ ದಾಸ್ತಾನನ್ನು ಒಂದೊಂದಾಗಿ ಬಯಲಿಗೆಳೆಯುತ್ತಿದ್ದು, ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಆಯೋಗ ಅಕ್ರಮಗಳನ್ನು ನಡೆಸಿರುವುದಕ್ಕೆ ನೂರಕ್ಕೆ ನೂರರಷ್ಟು ಸಾಕ್ಷ್ಯಗಳಿವೆ ಎಂದು ರಾಹುಲ್ ಗಾಂಧಿ ಹೇಳಿರುವುದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಇದ್ದಕ್ಕಿದ್ದಂತೆಯೇ ಹೊಸ ಮತದಾರರ ಸೇರ್ಪಡೆಯಾಗಿರುವುದು ಮತ್ತು ಹಳೆಯ ಮತದಾರರ ಹೆಸರುಗಳು ರದ್ದಾಗಿರುವುದರ ಬಗ್ಗೆ ನಮ್ಮ ಅನೇಕ ಕಾರ್ಯಕರ್ತರು ದೂರುಗಳನ್ನು ನೀಡಿದ್ದರು.
ನರೇಂದ್ರ ಮೋದಿ ಅವರ ಚುನಾವಣಾ ಗೆಲುವುಗಳಿಗೆ ಅವರ ಜನಪ್ರಿಯತೆಯಾಗಲಿ, ಬಿಜೆಪಿ ಸರ್ಕಾರದ ಸಾಧನೆಗಳಾಗಲಿ ಕಾರಣ ಅಲ್ಲ. ಅದು ಚುನಾವಣಾ ಆಯೋಗದ ಮೂಲಕ ನಡೆಸಿದ ‘’ಮತಗಳ್ಳತನ’’ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ. ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆ ಏನು ಕ್ರಮಕೈಗೊಳ್ಳಬೇಕೆಂಬ ಬಗ್ಗೆ ರಾಹುಲ್ ಗಾಂಧಿಯವರು ಮತ್ತು ಎಐಸಿಸಿ ಅಧ್ಯ್ಕಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಮಾಲೋಚಿಸಿ, ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.