ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಅವಧಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿರುವ ನ್ಯಾಯಾಧೀಶ ಮೈಕೆಲ್ ಡಿ ಕುನ್ಹಾ ಅವರು ಬುಧವಾರ ಅಂತಿಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಕೈಗೆ ನೀಡಿದರು.
ಕೋವಿಡ್ 19 ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ 2023ರ ಆಗಸ್ಟ್‌ನಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿತ್ತು. ಈ ಆಯೋಗವು 2025ರ ಏಪ್ರಿಲ್‌ನಲ್ಲಿ 1,808 ಪುಟಗಳ ಎರಡನೇ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಇದೀಗ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಆಯೋಗವು ವರದಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ, ಆದಾಗ್ಯೂ, ಈ ವಿಷಯದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ಪಾರದರ್ಶಕತೆಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ವರದಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಪರಿಗಣಿಸಬಹುದು ಎಂದು ಸರ್ಕಾರಕ್ಕೆ ನ್ಯಾ.ಜಾನ್ ಮೈಕೆಲ್ ಡಿ. ಕುನ್ಹಾ ತಿಳಿಸಿದ್ದಾರೆ.

