ಹೊಸದಿಗಂತ ವರದಿ,ಮಂಡ್ಯ:
ಕರ್ತವ್ಯ ಲೋಪದ ಆರೋಪದ ಮೇಲೆ ಜಿಲ್ಲೆಯ ಇಬ್ಬರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು(ಪಿಡಿಒ) ಅಮಾನತುಗೊಂಡಿದ್ದಾರೆ.
ಮದ್ದೂರು ತಾಲೂಕು ಕೆಸ್ತೂರು ಗ್ರಾಮ ಪಂಚಾಯಿತಿ ಪಿಡಿಒ ಬಿ.ಸಿ.ಪ್ರಕಾಶ್, ನಾಗಮಂಗಲ ತಾಲೂಕು ಚುಂಚನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಸೈಯದ್ ಇಮ್ರಾನ್ ಅಲಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಅವರು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ನ.೬ರಂದು ಜಿ.ಪಂ. ಸಿಇಒ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮನರೇಗಾ, ವಸತಿ ಯೋಜನೆ ಅನುಷ್ಠಾನ ಮತ್ತು ಆಸ್ತಿ ಸಮೀಕ್ಷ ಕರ‍್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಸರಕಾರದ ಯೋಜನೆಗಳು, ಕಾರ್ಯಕ್ರಮಗಳ ಪ್ರಗತಿ ಕುಂಠಿತವಾಗಲು ನೇರ ಕಾರಣರಾಗಿ ಕರ್ತವ್ಯ ಲೋಪವೆಸಗಿರುವ ಆರೋಪದ ಮೇಲೆ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
ಇಬ್ಬರೂ ಪಿಡಿಒಗಳ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ. ಈ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ೧೯೫೮ರ ನಿಯಮ ೯೮ರನ್ವಯ ಜೀವನಾಧಾರ ಭತ್ಯೆ ಪಡೆಯಲು ಅರ್ಹರಿರುತ್ತಾರೆ. ಆದರೆ, ಇವರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲವೆಂದು ಆದೇಶದಲ್ಲಿ ಜಿ.ಪಂ. ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ