ಹೊಸದಿಗಂತ ವರದಿ ಕಲಬುರಗಿ:
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾ ಜೊತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮೂಲದ ಮಮ್ತಾಜ್ ಮಲೀಕ್ ವಿರುದ್ಧ ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚೌಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಕಲಂ 113(3) ಮತ್ತು 197(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರು ಮಮ್ತಾಜ್ ಮಲೀಕ್ನ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ಆತ ಇಮಾಮ್ ಮೇಂದಿ ಹಾಗೂ ಉರ್ದು ಭಾಷೆಯ ವಾಟ್ಸ್ಆ್ಯಪ್ ಗ್ರೂಪ್ಗಳ ಸದಸ್ಯನಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಂಬಂಧಿಸಿದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿಯೂ ಆತ ಸದಸ್ಯನಾಗಿದ್ದ ಎಂಬ ಆರೋಪ ಕೇಳಿಬಂದಿದೆ.
ಪಾಕಿಸ್ತಾನದ ಜೈನುಲ್ ಅಬಿದಿನ್ (Zainul Abidin) ಎಂಬ ವ್ಯಕ್ತಿ ತನ್ನನ್ನು ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಿದ್ದಾಗಿ ಮಮ್ತಾಜ್ ಮಲೀಕ್ ಹೇಳಿದ್ದಾನೆ ಎನ್ನಲಾಗಿದೆ. ಈ ಜೈನುಲ್ ಅಬಿದಿನ್ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಮಾಹಿತಿಯನ್ನೂ ಪೊಲೀಸರು ಉಲ್ಲೇಖಿಸಿದ್ದಾರೆ.
ಇದಲ್ಲದೆ, ‘Kashmiri Tiger 313’, ‘I Love Pakistan’, ‘I Love Kashmir’ ಹಾಗೂ ‘major_iqbal_isi’ ಸೇರಿದಂತೆ ಪಾಕಿಸ್ತಾನಕ್ಕೆ ಸಂಬಂಧಿಸಿದ ಇನ್ಸ್ಟಾಗ್ರಾಂ ಖಾತೆಗಳನ್ನು ಮಮ್ತಾಜ್ ಮಲೀಕ್ ಫಾಲೋ ಮಾಡುತ್ತಿದ್ದ ಎಂಬ ಆರೋಪವಿದೆ. ‘major_iqbal_isi’ ಖಾತೆಯನ್ನು ಲಷ್ಕರ್-ಎ-ತೊಯ್ಬಾದ ಮುಖ್ಯ ಕಮಾಂಡರ್ಗೆ ಸಂಬಂಧಿಸಿದ್ದೆಂದು ಹೇಳಲಾಗಿದೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೊ ರೀಲ್ಸ್ಗಳನ್ನು ಲೈಕ್ ಮಾಡಿ ಫಾಲೋ ಮಾಡುತ್ತಿದ್ದ ಎಂಬ ಅಂಶವೂ ದೂರಿನಲ್ಲಿ ಪ್ರಸ್ತಾಪವಾಗಿದೆ.
ಮಮ್ತಾಜ್ ಮಲೀಕ್ನ ಮೊಬೈಲ್ ಫೋನ್ನಲ್ಲಿದ್ದ ಕೆಲವು ಫೋಟೊಗಳು ಮತ್ತು ವಿಡಿಯೊಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.



