ಹೊಸದಿಗಂತ ಡಿಜಿಟಲ್ ಡೆಸ್ಕ್:
2020ರಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಬಗ್ಗೆ ಸರ್ಕಾರವನ್ನು ಟೀಕಿಸುವ ಪೋಸ್ಟ್ಗಳನ್ನು ತೆಗೆದುಹಾಕುವ ಮತ್ತು (Farmers protest)ಒಳಗೊಂಡ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಟ್ವಿಟರ್ಗೆ (Twitter) ಒತ್ತಡ ಹೇರಿದೆ ಎಂಬ ಮಾಜಿ ಟ್ವಿಟರ್ ಸಿಇಒ ಮತ್ತು ಸಂಸ್ಥಾಪಕ ಜಾಕ್ ಡಾರ್ಸಿ (Jack Dorsey) ಅವರ ಹೇಳಿಕೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಮಂಗಳವಾರ ತಳ್ಳಿಹಾಕಿದ್ದಾರೆ.
ಡಾರ್ಸಿ ಅವರ ಹೇಳಿಕೆ ಹಸಿ ಸುಳ್ಳು. ಭಾರತದಲ್ಲಿ ಚುನಾವಣೆ ಸಮೀಪಿಸಿದಾಗ ಹಲವಾರು ವಿದೇಶಿ ಶಕ್ತಿಗಳು ಎಚ್ಚರಗೊಳ್ಳುತ್ತವೆ ಎಂದು ಹೇಳಿದರು.
‘ಟ್ವಿಟರ್ ಫೈಲ್ಸ್’ ನಲ್ಲಿ ಡಾರ್ಸಿ ಮಾಡಿದ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಠಾಕೂರ್, ಅವರು ಹೇಳಿದ್ದು ಹಸಿ ಸುಳ್ಳು. ಜಾಕ್ ಡಾರ್ಸಿ ವರ್ಷಗಳ ನಿದ್ರೆಯ ನಂತರ ಎಚ್ಚರಗೊಂಡು ತನ್ನ ದುಷ್ಕೃತ್ಯಗಳನ್ನು ಮುಚ್ಚಿಡಲು ಬಯಸುತ್ತಾರೆ. ಟ್ವಿಟರ್ ಅನ್ನು ಇನ್ನೊಬ್ಬ ವ್ಯಕ್ತಿ ಖರೀದಿಸಿದಾಗ, ಪ್ಲಾಟ್ಫಾರ್ಮ್ ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ‘ಟ್ವಿಟ್ಟರ್ ಫೈಲ್ಸ್’ ನಲ್ಲಿ ಬಹಿರಂಗಪಡಿಸಲಾಗಿದೆ. ಜಾಕ್ ಡಾರ್ಸಿ ಅವರು ಕೃತ್ಯಗಳು ಬಯಲಾದ ಕಾರಣ ಅವರಿಗೆ ಉತ್ತರಿಸಲು ಆಗುತ್ತಿಲ್ಲ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಸ್ವಲ್ಪ ಮುಂಚಿತವಾಗಿ ಹೇಳಿಕೆ ನೀಡಿದ್ದರಿಂದ ಭಾರತದಲ್ಲಿ ಚುನಾವಣೆಗಳು ಸಮೀಪಿಸಿದಾಗ ಭಾರತದಲ್ಲಿ ಹಲವಾರು ವಿದೇಶಿ ಶಕ್ತಿಗಳು ಮತ್ತು ಅವರ ಏಜೆಂಟರು ಎಚ್ಚರಗೊಳ್ಳುತ್ತಾರೆ ಎಂದಿದ್ದಾರೆ.
ಭಾರತೀಯ ಪ್ರಜಾಪ್ರಭುತ್ವವು ಪ್ರಬಲವಾಗಿದೆ, ಜಗತ್ತು ಭಾರತಕ್ಕೆ ಭರವಸೆ ನೀಡುತ್ತದೆ. ಅದೇ ವೇಳೆ ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸುವಲ್ಲಿ ವಿದೇಶಿ ಶಕ್ತಿಗಳು ಯಶಸ್ವಿಯಾಗುವುದಿಲ್ಲ ಎಂದು ಅವರು ಠಾಕೂರ್ ಒತ್ತಿ ಹೇಳಿದ್ದಾರೆ.
ಟ್ವಿಟರ್ ಫೈಲ್ಸ್ ಎಂಬುದು ಎಲಾನ್ ಮಸ್ಕ್ ಟ್ವಿಟರ್ ನಲ್ಲಿ ಅಧಿಕಾರ ವಹಿಸಿಕೊಂಡಾಗ ಜಾಕ್ ಡಾರ್ಸಿ ಅವರ ಆಡಳಿತದಲ್ಲಿ ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ನಲ್ಲಿ ನಡೆಸಿದ ದುಷ್ಕೃತ್ಯಗಳನ್ನು ಬಹಿರಂಗಪಡಿಸಲು ತಂದ ಟ್ವೀಟ್ಗಳ ಸರಣಿಯಾಗಿದೆ.
ಕಳೆದ ವರ್ಷ ಟ್ವಿಟರ್ ಮಂಡಳಿಯಿಂದ ಕೆಳಗಿಳಿದಿದ್ದ ಡಾರ್ಸಿ ಸೋಮವಾರ ಯೂಟ್ಯೂಬ್ ಚಾನೆಲ್ ‘ಬ್ರೇಕಿಂಗ್ ಪಾಯಿಂಟ್ಸ್ ವಿತ್ ಕ್ರಿಸ್ಟಲ್ ಮತ್ತು ಸಾಗರ್’ಗೆ ನೀಡಿದ ಸಂದರ್ಶನದಲ್ಲಿ, ಭಾರತ ಸರ್ಕಾರವು ಟ್ವಿಟರ್ ಮೇಲೆ ಒತ್ತಡ ಹೇರಿದೆ ಮತ್ತು ಭಾರತದಲ್ಲಿ ಕಂಪನಿಯನ್ನು ಮುಚ್ಚುವುದಾಗಿ ಹೇಳಿದೆ ಎಂದು ಆರೋಪಿಸಿದ್ದರು.ಅಷ್ಟೇ ಅಲ್ಲ ಅದರ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು ಎಂದಿದ್ದಾರೆ.